ADVERTISEMENT

ನಗರದಲ್ಲಿ ವರುಣನ ಅಬ್ಬರ

ಅರವಿಂದನಗರದಲ್ಲಿ ಬಸ್‌ ಡಿಪೋ ಗೋಡೆ ಕುಸಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 2:07 IST
Last Updated 10 ಅಕ್ಟೋಬರ್ 2020, 2:07 IST
ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಲ್ಲಿಯೇ, ಮೈಸೂರಿನ ಚಾಮುಂಡಿಪುರಂ ವೃತ್ತದ ಬಳಿ ಸಂಚರಿಸಿದ ವಾಹನಗಳು
ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಲ್ಲಿಯೇ, ಮೈಸೂರಿನ ಚಾಮುಂಡಿಪುರಂ ವೃತ್ತದ ಬಳಿ ಸಂಚರಿಸಿದ ವಾಹನಗಳು   

ಮೈಸೂರು: ನಗರದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ಹಲವೆಡೆ ರಸ್ತೆಗಳು ಜಲಾವೃತಗೊಂಡವು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತು.

ಶುಕ್ರವಾರ ಮಧ್ಯಾ‌ಹ್ನ 3.30 ರಿಂದ ಶುರುವಾದ ಮಳೆ ರಾತ್ರಿಯವರೆಗೂ ಮುಂದುವರಿಯಿತು. ಅರವಿಂದನಗರದ ಬಸ್‌ ಡಿಪೋ ಕಾಂಪೌಂಡ್‌ ಕುಸಿದು ಸ್ಥಳೀಯ ನಿವಾಸಿ ನಂಜುಂಡಸ್ವಾಮಿ (58) ಎಂಬವರು ಮೃತಪಟ್ಟಿದ್ದಾರೆ. ಟೈಲರ್‌ ವೃತ್ತಿ ನಡೆಸುತ್ತಿದ್ದ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

ಕಾಂಪೌಂಡ್‌ ಬಳಿ ನಿಂತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. 10 ಅಡಿಗೂ ಎತ್ತರದ ಗೋಡೆ ಏಕಾಏಕಿ ಕುಸಿದಾಗ ಕಲ್ಲುಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ತಲೆಗೆ ಗಂಭೀರ ಏಟು ಬಿದ್ದ ಕಾರಣ ಸಾವು ಸಂಭವಿಸಿದೆ. ಸಮೀಪದಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳು ಜಖಂಗೊಂಡಿವೆ.

ADVERTISEMENT

ಬಸ್‌ ಡಿಪೋ ಸುರಕ್ಷತೆಗಾಗಿ ನಿರ್ಮಿಸಿದ್ದ ಗೋಡೆಯ ಹಿಂಭಾಗದಲ್ಲಿ ಚರಂಡಿ ನೀರು ನಿಂತಿತ್ತು. ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದ ಕಾರಣ ಹೆಚ್ಚಿನ ನೀರು ಸಂಗ್ರಹವಾಗಿ ಗೋಡೆಯ ತಳ ಭಾಗ ಶಿಥಿಲಗೊಂಡು ಸಂಜೆ 4.50ರ ವೇಳೆಗೆ ದುರ್ಘಟನೆ ಸಂಭವಿಸಿದೆ. ಅರವಿಂದ ನಗರದ 15ನೇ ಅಡ್ಡರಸ್ತೆಗೆ ಹೊಂದಿಕೊಂಡಂತೆ ಇರುವ ಗೋಡೆ ಸುಮಾರು 50 ಮೀ.ನಷ್ಟು ಉದ್ದಕ್ಕೂ ಕುಸಿದಿದೆ.

ಗೋಡೆಯ ಕಲ್ಲುಗಳು ರಸ್ತೆಗೆ ಉರುಳಿದ ಕಾರಣ ಕೆಲಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿ ಸಲಾಗಿತ್ತು. ಕುವೆಂಪುನಗರ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾಲಿಕೆ ಸಿಬ್ಬಂದಿ ತೆರವು ನಡೆಸಿದರು.

ನೆರವಿನ ಭರವಸೆ: ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್‌.ಎ.ರಾಮದಾಸ್‌ ಅವರು ಮೃತರ ಕುಟುಂಬಕ್ಕೆ ಸರ್ಕಾರದಿಂದ ₹ 5 ಲಕ್ಷ ಪರಿಹಾರ ಹಣ ನೀಡುವ ಭರವಸೆ ನೀಡಿದರು. ರಾಷ್ಟ್ರೀಯ ಭದ್ರತಾ ಯೋಜನೆಯಡಿ ತಾತ್ಕಾಲಿಕ ಪರಿಹಾರ ರೂಪದಲ್ಲಿ ₹ 20 ಸಾವಿರ ಮತ್ತು ಶವ ಸಂಸ್ಕಾರಕ್ಕೆ ₹ 5 ಸಾವಿರ ಕೊಡಿಸುವುದಾಗಿ ತಿಳಿಸಿದರು.

ರಸ್ತೆಗಳು ಜಲಾವೃತ: ಶುಕ್ರವಾರ ಸಂಜೆ ವೇಳೆ ನಗರದ ವಿವಿಧೆಡೆ ಸುಮಾರು ಒಂದೂವರೆ ಗಂಟೆ ಧಾರಾಕಾರ ಮಳೆ ಸುರಿಯಿತು. ಆ ಬಳಿಕ ಜಿಟಿಜಿಟಿ ಮಳೆ ಮುಂದುವರಿಯಿತು. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದವು.

ಚಾಮುಂಡಿಪುರಂ ವೃತ್ತದ ಬಳಿ ರಸ್ತೆಯಲ್ಲೇ ಭಾರಿ ಪ್ರಮಾಣದ ನೀರು ಹರಿದ ಕಾರಣ ವಾಹನ ಸವಾರರು ಪರದಾಟ ನಡೆಸಿದರು. ಅಪೋಲೊ ಆಸ್ಪತ್ರೆ ಮುಂಭಾಗದ ರಸ್ತೆಯೂ ಜಲಾವೃತಗೊಂಡಿತ್ತು. ಚಿಕ್ಕಗಡಿಯಾರ ಸಮೀಪದ ರಸ್ತೆ, ವಾಲ್ಮೀಕಿ ರಸ್ತೆಯಲ್ಲೂ ನೀರು ನಿಂತಿತ್ತು.

ನಗರದಲ್ಲಿ ಬುಧವಾರ ಮತ್ತು ಗುರುವಾರವೂ ಉತ್ತಮ ಮಳೆಯಾಗಿತ್ತು. ಸತತ ಮಳೆಯಿಂದಾಗಿ ಬಿಸಿಲಿನ ಬೇಗೆ ತಗ್ಗಿದೆ. ನಗರ ಮಾತ್ರವಲ್ಲದೆ, ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.