ADVERTISEMENT

ಹುಣಸೂರು | 'ಬಾಲ ಕಾರ್ಮಿಕ ಪಿಡುಗು ಕೊನೆಗೊಳಿಸಿ'

ಕಾರ್ಮಿಕರ ದಿನಾಚರಣೆ: ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ

​ಪ್ರಜಾವಾಣಿ ವಾರ್ತೆ
Published 11 ಮೇ 2025, 14:00 IST
Last Updated 11 ಮೇ 2025, 14:00 IST
ಹುಣಸೂರು ನಗರದ ರೋಟರಿ ಭವನದಲ್ಲಿ ಶನಿವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶೇ ಅನಿತಾ ಉದ್ಘಾಟಿಸಿದರು.ನ್ಯಾ.ನಮ್ರತಾ ಎಸ್.ಹೊಮಠ, ಜಿ.ಬಿ.ವೀನಾ, ಶಿವಣ್ಣೇಗೌಡ, ಪ್ರಸನ್ನ ಇದ್ದಾರೆ.
ಹುಣಸೂರು ನಗರದ ರೋಟರಿ ಭವನದಲ್ಲಿ ಶನಿವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶೇ ಅನಿತಾ ಉದ್ಘಾಟಿಸಿದರು.ನ್ಯಾ.ನಮ್ರತಾ ಎಸ್.ಹೊಮಠ, ಜಿ.ಬಿ.ವೀನಾ, ಶಿವಣ್ಣೇಗೌಡ, ಪ್ರಸನ್ನ ಇದ್ದಾರೆ.   

ಹುಣಸೂರು: ‘ಪ್ರತಿಯೊಬ್ಬ ವ್ಯಕ್ತಿಯೂ ಕಾರ್ಮಿಕ ಆಗಿದ್ದು, ನಮ್ಮಲ್ಲಿ ಮಾಲೀಕತ್ವ ಮನೋಭಾವ ದೂರವಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕಾಗಿದೆ’ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ ಹೇಳಿದರು.

ನಗರದಲ್ಲಿ ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆಧುನಿಕ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ.  ಮಾಲೀಕತ್ವ ಮನಸ್ಥಿತಿ ಇಂದು ಬದಲಾಗುತ್ತಿದ್ದು,  ಮಾಲೀಕ ಮತ್ತು ಕಾರ್ಮಿಕ ಇಬ್ಬರೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಕೆಲಸ ನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ’ ಎಂದರು.

ADVERTISEMENT

ಬಾಲಕಾರ್ಮಿಕ: ‘ಬಾಲ ಕಾರ್ಮಿಕ ಪಿಡುಗು ಆಡಳಿತ ವರ್ಗಕ್ಕೆ ಸವಾಲಾಗಿದ್ದು, ಕೃಷಿ ಕ್ಷೇತ್ರ, ಕಾರ್ಖಾನೆ ಸೇರಿದಂತೆ ಹಲವೆಡೆ ಬಾಲ ಕಾರ್ಮಿಕರನ್ನು ವಿವಿಧ ಹಂತದಲ್ಲಿ ಕಾಣುತ್ತಿದ್ದೇವೆ. ಬಾಲ ಕಾರ್ಮಿಕ ವಲಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರ ಹಲವು ಕಾನೂನು ಜಾರಿಗೊಳಿಸಿದ್ದರೂ ತಳ ವರ್ಗದಲ್ಲಿನ ಕಾಡುವ ಆರ್ಥಿಕ ಪರಿಸ್ಥಿತಿ ಬಾಲ ಕಾರ್ಮಿಕತೆಗೆ ಜೀವ ತುಂಬಿದೆ. ಸಾಮಾಜಿಕ ಪರಿವರ್ತನೆ ಪ್ರಯತ್ನದೊಂದಿಗೆ ಜಾಗೃತಿ ಮೂಡಿಸಿದರೆ ಬದಲಾವಣೆ ತರಲು ಸಾಧ್ಯ ಎಂದರು.

ವಕೀಲೆ ಆರ್.ಎಸ್.ಪವಿತ್ರಾ ಸಭೆಗೆ ಕಾರ್ಮಿಕ ಕಾನೂನು, ಹಕ್ಕು ಮತ್ತು ಕರ್ತವ್ಯ ಕಾರ್ಮಿಕರ ಸುರಕ್ಷತೆಗೆ ತೆಗೆದುಕೊಳ್ಳಬೇಕಿರುವ ಕ್ರಮ, ಕಾರ್ಮಿಕರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಪರಿಹಾರ ಕುರಿತಂತೆ ಮಾಹಿತಿ ನೀಡಿದರು.

ಹಿರಿಯ ಕಾರ್ಮಿಕ ನಿರೀಕ್ಷಕಿ ಜಿ.ಬಿ.ವೀನಾ ಮಾತನಾಡಿ, ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಕಾರ್ಮಿಕ ಇಲಾಖೆ ನೋಂದಣಿ ಅಭಿಯಾನದಲ್ಲಿ ಕಾರ್ಮಿಕರು ಪಾಲ್ಗೊಂಡು ಸವಲತ್ತು ಪಡೆಯಬೇಕು ಎಂದು ತಿಳಿಸಿದರು.

ವಿತರಣೆ:  ಕಾರ್ಮಿಕ ಇಲಾಖೆನೀಡಿದ ವಿವಿಧ ಕ್ಷೇತ್ರದಲ್ಲಿ ತರಬೇತಿ ಹೊಂದಿದ 400 ಕಾರ್ಮಿಕರಿಗೆ ಸಲಕರಣೆ ಕಿಟ್ ಮತ್ತು ಪ್ರಮಾಣ ಪತ್ರ ವಿತರಿಸಿದರು.

 ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮ್ರತಾ ಎಸ್.ಹೊಸಮಠ, ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಉಪಾಧ್ಯಕ್ಷ ಹರೀಶ್ ಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ಪ್ರಸನ್ನ, ಕಾರ್ಮಿಕ ಇಲಾಖೆ ಅಧಿಕಾರಿ ಲಕ್ಷ್ಮೀಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.