ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿ ಕೇಂದ್ರದಲ್ಲಿ ಸೋಮವಾರ ಬೃಹತ್ ಮರ ರಸ್ತೆಗೆ ಉರುಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
‘ಮಧ್ಯಾಹ್ನ 1.30ರ ಸುಮಾರಿಗೆ ಮರ ಧರೆಗೆ ಉರುಳಿದೆ. ಮರದ ಬುಡ ಶಿಥಿಲವಾಗಿತ್ತು, ವಿಷಯವನ್ನು ಸ್ಥಳೀಯ ಆಡಳಿತದ ಗಮನಕ್ಕೆ ತರಲಾಗಿತ್ತು. ಅರಣ್ಯ ಇಲಾಖೆ ಮರ ತೆರವುಗೊಳಿಸುವ ಪ್ರಯತ್ನ ನಡೆಸದೆ ಈ ಅವಘಡ ಸಂಭಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಗಣಪತಿ ಇಂಡೋಳ್ಕರ್ ತಿಳಿಸಿದರು.
‘ಮರ ಬಿದ್ದ ಸ್ಥಳದ ಸಮೀಪ ಪಶುವೈದ್ಯ ಶಾಲೆ, ಹಾಲು ಉತ್ಪನ್ನ ಸಂಗ್ರಹ ಕೇಂದ್ರ ಮತ್ತು ಪ್ರಾಥಮಿಕ ಶಾಲೆ ಇದ್ದು, ನಿತ್ಯ ಈ ಪ್ರದೇಶ ಜನಜಂಗುಳಿಯಿಂದ ಕೂಡಿರುತ್ತಿತ್ತು. ಇಂದು ಯಾರೂ ಇಲ್ಲದ ಸಮಯದಲ್ಲಿ ಮರ ಬಿದ್ದಿದೆ, ಇಲ್ಲದಿದ್ದರೆ ಅನಾಹುತ ಸಂಭವಿಸುತ್ತಿತ್ತು’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ವ್ಯತ್ಯಯ: ಘಟನೆಯಿಂದ ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿದ್ದು, ಸ್ಥಳೀಯರು ಮರ ತೆರವುಗೊಳಿಸಿವ ಕಾರ್ಯ ನಡೆಸಿದರು. ಕೆ.ಆರ್.ನಗರ– ಹುಣಸೂರು ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.