ADVERTISEMENT

ತೆರಿಗೆ ಅಧಿಕಾರಿ ಜತೆ ಮುಖಾಮುಖಿ ಇಲ್ಲ: ನಿರ್ಮಲಾ ಸೀತಾರಾಮನ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 14:20 IST
Last Updated 22 ಆಗಸ್ಟ್ 2019, 14:20 IST
ಗುರುವಾರ ಮೈಸೂರಿಗೆ ಬಂದ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ವಾಗತಿಸಲಾಯಿತು
ಗುರುವಾರ ಮೈಸೂರಿಗೆ ಬಂದ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ವಾಗತಿಸಲಾಯಿತು   

ಮೈಸೂರು: ತೆರಿಗೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ‘ಮುಖಾಮುಖಿ ರಹಿತ’ವಾಗಿ ನಡೆಯಲಿದ್ದು, ಈ ವ್ಯವಸ್ಥೆ ಮುಂಬರುವ ವಿಜಯದಶಮಿ ದಿನದಿಂದ ಪೂರ್ಣಪ್ರಮಾಣದಲ್ಲಿ ಜಾರಿಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ತೆರಿಗೆ ಇಲಾಖೆಯಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಲಾಗುವುದು. ಎಲ್ಲ ರೀತಿಯ ತೆರಿಗೆ ವಿವರಗಳ ಪರಿಶೀಲನೆ ಸಂಪೂರ್ಣವಾಗಿ ಆನ್‌ಲೈನ್‌ ಮೂಲಕ ನಡೆಯಲಿದೆ. ಅಧಿಕಾರಿಗಳು ಮತ್ತು ತೆರಿಗೆದಾರರ ನೇರ ಮುಖಾಮುಖಿ ತಪ್ಪಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೆರಿಗೆದಾರರು. ವರ್ತಕರು, ಉದ್ದಿಮೆದಾರರು ಯಾವುದೇ ಗೊಂದಲ, ಅನುಮಾನಗಳು ಇದ್ದರೆ ಎಸ್‌ಎಂಎಸ್‌, ಇ–ಮೇಲ್‌ ಅಥವಾ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಅಧಿಕಾರಿಯ ಜತೆ ಸಂವಹನ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದರು.

ADVERTISEMENT

ತೆರಿಗೆ ಸಂಗ್ರಹ ಗುರಿ ಸಾಧ್ಯ: ಈ ಬಾರಿಯ ಬಜೆಟ್‌ನಲ್ಲಿ ನಿಗದಿಪಡಿಸಿದ ನೇರ ತೆರಿಗೆ ಸಂಗ್ರಹ ಗುರಿ ಅಸಾಧ್ಯವಾದುದೇನೂ ಅಲ್ಲ. ಹಣಕಾಸು ಸಚಿವಾಲಯ ಸಾಕಷ್ಟು ಸಮಾಲೋಚನೆ ನಡೆಸಿ ಗುರಿ ನಿಗದಿಪಡಿಸಿದೆ. ತೆರಿಗೆ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಈ ಗುರಿ ಈಡೇರಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.

ಸರಣಿ ಸಭೆ: ‘ವ್ಯಾಪಾರ, ಕೈಗಾರಿಕೆ ಮತ್ತು ಉದ್ಯಮದ ವಿವಿಧ ವಲಯಗಳ ಪ್ರತಿನಿಧಿಗಳ ಜತೆ ಸರಣಿ ಸಭೆಗಳನ್ನು ನಡೆಸುತ್ತಿದ್ದೇನೆ. ಅಹಮದಾಬಾದ್‌ ಮತ್ತು ವಾರಣಾಸಿ ಬಳಿಕ ಮೂರನೇ ಸಭೆಯನ್ನು ಮೈಸೂರಿನಲ್ಲಿ ನಡೆಸಿದ್ದೇನೆ. ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ವಾಣಿಜ್ಯೋದ್ಯಮ ಸಂಘಟನೆಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.