ADVERTISEMENT

ನಗರದ ಹಲವೆಡೆ ಸ್ವಾತಂತ್ರ್ಯ ದಿನಾಚರಣೆ

ಪಠ್ಯದಲ್ಲಿ ದೇಶಭಕ್ತಿಯ ಸಂಗತಿ ಅಳವಡಿಸಲು ಸ್ವಾತಂತ್ರ್ಯ ಹೋರಾಟಗಾರ ಡಾ.ಎಂ.ಜಿ.ಕೃಷ್ಣಮೂರ್ತಿ ಕರೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 7:20 IST
Last Updated 16 ಆಗಸ್ಟ್ 2020, 7:20 IST
ಮೈಸೂರಿನ ಸುತ್ತೂರು ಮಠದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಡಾ.ಎಂ.ಜಿ.ಕೃಷ್ಣಮೂರ್ತಿ ಧ್ವಜಾರೋಹಣ ನೆರವೇರಿಸಿದರು
ಮೈಸೂರಿನ ಸುತ್ತೂರು ಮಠದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಡಾ.ಎಂ.ಜಿ.ಕೃಷ್ಣಮೂರ್ತಿ ಧ್ವಜಾರೋಹಣ ನೆರವೇರಿಸಿದರು   

ಮೈಸೂರು: ನಗರದಲ್ಲೆಡೆ ಶನಿವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಇಲ್ಲಿನ ಸುತ್ತೂರು ಮಠದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮೈಸೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ‘ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವುಯವರೆಗೂ ದೇಶಭಕ್ತಿ ಉಂಟು ಮಾಡುವಂತಹ ಪಠ್ಯಗಳನ್ನು ಅಳವಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಇಂದಿನ ಮಕ್ಕಳು, ಯುವಕರು ಹಾಗೂ ರಾಜಕಾರಣಿಗಳು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಅದರ ಪರಿವೇ ಇಲ್ಲದವರಿಗೆ ದೇಶವನ್ನು ಸದೃಢವಾಗಿ ಮುನ್ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಆಸ್ಪತ್ರೆಯ ನರರೋಗ ತಜ್ಞ ಕರ್ನಲ್ ಡಾ.ಟಿ.ಎಸ್.ವಾಸನ್, ಆಯುರ್ವೇದ ತಜ್ಞ ವೈದ್ಯ ಡಾ.ಬಿ.ಗುರುಬಸವರಾಜು ಇದ್ದರು.

ಮುಕ್ತ ವಿವಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಗೌರವ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕೊರೊನಾ ವಾರಿಯರ್ಸ್‌ ಆದ ಚಲುವಾಂಬ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ಸೌಭಾಗ್ಯ ಹಾಗೂ ಕೆ.ಆರ್.ಆಸ್ಪತ್ರೆಯ ಗ್ರೂಪ್ ‘ಡಿ’ ನೌಕರರಾದ ಮಂಜುನಾಥ್ ಅವರನ್ನು ಗೌರವಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ‘‌‌ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ನಿತ್ಯವೂ ನಾವು ಸ್ಮರಿಸಬೇಕು. ಅವರ ತತ್ವ ಮತ್ತು ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಡೀನ್ (ಶೈಕ್ಷಣಿಕ) ಡಾ.ತೇಜಸ್ವಿ ನವಿಲೂರು, ಡಾ.ಕಾಂಬ್ಳೆ ಅಶೋಕ್, ಕುಲಪತಿ ವಿಶೇಷಾಧಿಕಾರಿ ಪ್ರೊ.ದೇವರಾಜು ಇದ್ದರು.

ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು– ಸುಧಾಕರ ಶೆಟ್ಟಿ

ಇಲ್ಲಿನ ಜ್ಞಾನಸರೋವರ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಶಾಲೆಯ ಸಂಸ್ಥಾಪಕ ಸುಧಾಕರ್ ಶೆಟ್ಟಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ‘ಭಾರತೀಯತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೊನಾ ವೈರಸ್‌ ಅನ್ನು ನಿಯಂತ್ರಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಸರ್ಕಾರವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಆನ್‌ಲೈನ್‌ ಶಿಕ್ಷಣ ಉಪಯೋಗಿಸಲು ಬಾರದ ಪೋಷಕರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ, ಅವರು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಕಾರ್ಯದರ್ಶಿ ಸುಖಲತಾ ಶೆಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಶೆಟ್ಟಿ ಇದ್ದರು.

ವಿಶ್ವಪ್ರಜ್ಞ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮೈಸೂರಿನ ದಟ್ಟಗಳ್ಳಿಯಲ್ಲಿರುವ ವಿಶ್ವಪ್ರಜ್ಞ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಕೆ.ಸುರೇಶ್‍ಬಾಬು ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ವೈ.ಎನ್.ಶಂಕರೇಗೌಡ, ಕಾರ್ಯದರ್ಶಿ ಎಂ.ಎನ್.ಮಹೇಂದ್ರ, ಆಡಳಿತ ಮಂಡಳಿಯ ಸದಸ್ಯ ಸತ್ಯಾನಂದ, ಎ.ಆರ್.ದೇವರಾಜು, ಕಾರ್ಯಾಧ್ಯಕ್ಷ ಎಂ.ಎನ್.ಕೃಷ್ಣಸ್ವಾಮಿ, ಮುಖ್ಯ ಶಿಕ್ಷಕಿ ಜಿ.ಎನ್.ಸುಧಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.