ಹುಣಸೂರು: ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರ ನಡೆಸುತ್ತಿರುವ ಜಾತಿಗಣತಿಯಲ್ಲಿ ಬುಂಡೆ ಬೆಸ್ತರು ಎಂದು ನಮೂದಿಸದೆ ‘ಶಿಳ್ಳೆಕ್ಯಾತಾಸ್’ ಎಂದು ನಮೂದಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಬುಂಡೆಬೆಸ್ತರ ಕಾಲೊನಿ ನಿವಾಸಿಗರು ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ನೀಡಿದರು.
‘ತಾಲ್ಲೂಕಿನಾದ್ಯಂತ ಜಾತಿ ಗಣತಿ ಪ್ರಕ್ರಿಯೆ ನಡೆದಿದ್ದು, ಈ ಸಂಬಂಧ ಮನೆಗಳಿಗೆ ಗಣತಿ ಕಾರ್ಯ ನಡೆಸುವ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಈ ಸಮಾಜಕ್ಕೆ ಸರ್ಕಾರ ಬುಂಡೆ ಬೆಸ್ತರು ಎಂದು ಕರೆದು ಪ್ರವರ್ಗ– 1ಕ್ಕೆ ಸೇರಿಸಿದ್ದಾರೆ. ಇದರಿಂದಾಗಿ ನಮ್ಮ ಸಮಾಜಕ್ಕೆ ಸವಲತ್ತುಗಳು ಸಿಗದೆ ಸಮಾಜದ ಯುವಕರು ಇಂದಿಗೂ ಸಾಂಪ್ರದಾಯಕ ವೃತ್ತಿಯಲ್ಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ’ ಎಂದು ಗ್ರಾ.ಪಂ. ಸದಸ್ಯ ರಾಮಕೃಷ್ಣ ಹೇಳಿದರು.
ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ‘ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಸಮಾಜದವರನ್ನು ದಶಕಗಳ ಹಿಂದೆ ಅಂದಿನ ಗ್ರಾಮ ಲೆಕ್ಕಾಧಿಕಾರಿಗಳು ಬುಂಡೆ ಬೆತ್ತರು ಎಂದು ದಾಖಲಿಸಲಾಗಿ ಇಂದಿಗೂ ಈ ಸಮಾಜದವರ ಮೂಲ ಜಾತಿ ಹೆಸರು ಎಲ್ಲಿಯೂ ನಮೂದಾಗದೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಮುದಾಯದವರು ವಾಸವಿದ್ದು ಈ ಭಾಗದಲ್ಲಿ ಶಿಳ್ಳೆಕ್ಯಾತಾಸ್ ಎಂದು ಕರೆಯುತ್ತಿದ್ದು, ದಾಖಲೆಯಲ್ಲಿಯೂ ಇದೇ ಹೆಸರು ನಮೂದಾಗಿದೆ. ಈ ಜನರಿಗೆ ಒಳಮೀಸಲಾತಿ ಸಿಗಲು ಸರ್ಕಾರ ಬುಂಡೆ ಬೆಸ್ತರು ಎಂಬ ಹೆಸರು ಕೈ ಬಿಟ್ಟು ಶಿಳ್ಳೆಕ್ಯಾತಾಸ್ ಎಂದು ನಮೂದಿಸಿಕೊಳ್ಳಲು ಜಾತಿ ಗಣತಿ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಆಗ್ರಹಿಸಿದರು.
‘ಬುಂಡೆಬೆಸ್ತರ ಕಾಲೊನಿಯಲ್ಲಿ 600 ಕುಟುಂಬಗಳು ವಾಸಿಸುತ್ತಿದ್ದು 2 ಸಾವಿರಕ್ಕೂ ಹೆಚ್ಚು ಜನರು ಬದುಕು ಕಟ್ಟಿಕೊಂಡಿದ್ದೇವೆ. ಗ್ರಾಮದಲ್ಲಿ ಮೂಲ ಸವಲತ್ತು ಇಲ್ಲದೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ಮುಖಂಡ ಸಣ್ಣಸ್ವಾಮಿ ಹೇಳಿದರು.
‘ನ್ಯಾಯಬೆಲೆ ಅಂಗಡಿ ಇಲ್ಲದೆ ಪಡಿತರ ಪಡೆಯಲು 3 ಕಿ.ಮೀ ನಡೆದು ಹೋಗಬೇಕು, ಸ್ಮಶಾನವಿಲ್ಲದೆ ಅಂತ್ಯ ಸಂಸ್ಕಾರಕ್ಕೆ ಹೊಲಗಳಲ್ಲಿ ನಡೆಸಬೇಕಾಗಿದೆ’ ಎಂದು ತಹಶೀಲ್ದಾರ್ ಗಮನಕ್ಕೆ ಗ್ರಾಮಸ್ಥರು ತಂದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ‘ಗ್ರಾಮಸ್ಥರ ಮನವಿಯನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸಿ ಪರಿಗಣಿಸುವಂತೆ ಮನವಿ ಮಾಡುತ್ತೇನೆ. ಮೂಲ ಸವಲತ್ತು ಕಲ್ಪಿಸುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.
ಗ್ರಾಮದ ರಮೇಶ್, ಶಿವಣ್ಣ, ರಮೇಶ್, ಪಿ.ಆರ್.ಸಣ್ಣಸ್ವಾಮಿ, ಗುಂಡು, ಅಣ್ಣಾಜಿ, ಮುತ್ತಪ್ಪ, ಅಣ್ಣಯ್ಯ ಬೋಡಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.