ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ಜಾನಪದ ಸುಗ್ಗಿ

‘ಬಾರಯ್ಯ ಬೆಳಂದಿಗಳೆ’, ‘ಗೆಜ್ಜೆ ಮಾತಾಡುತಾವೆ’ಯಲ್ಲಿ ಮಿಂದೆದ್ದ ಕಲಾಮಂದಿರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 13:05 IST
Last Updated 20 ಡಿಸೆಂಬರ್ 2020, 13:05 IST
ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ‘ಜಾನಪದ ಸುಗ್ಗಿ’ ಕಾರ್ಯಕ್ರಮದಲ್ಲಿ ವೀರಗಾಸೆ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದರು
ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ‘ಜಾನಪದ ಸುಗ್ಗಿ’ ಕಾರ್ಯಕ್ರಮದಲ್ಲಿ ವೀರಗಾಸೆ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದರು   

ಮೈಸೂರು: ಇಲ್ಲಿನ ಕಲಾಮಂದಿರದಲ್ಲಿ ಭಾನುವಾರ ಜನಪದ ಗೀತೆಗಳು, ಜನ‍ಪದ ನೃತ್ಯಗಳು ಹಾಗೂ ಜನಪದ ಕುರಿತ ಉಪನ್ಯಾಸಗಳು ಮುಪ್ಪುರಿಗೊಂಡವು. ನೂರಾರು ಕಲಾವಿದರ ಅಪರೂಪದ ಕಲಾಪ್ರದರ್ಶನಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ನಡೆದ ‘ಜಾನಪದ ಸುಗ್ಗಿ’ ವೇದಿಕೆ ಒದಗಿಸಿತು.

ಕಂಸಾಳೆ, ನಗಾರಿ, ವೀರಗಾಸೆ, ಚಿಟ್‌ಮೇಳ, ಡೊಳ್ಳುಕುಣಿತ, ತಮಟೆ ವಾದನ, ಗೊರವರ ಕುಣಿತ, ಸುಗ್ಗಿ ಕುಣಿತ ಸೇರಿದಂತೆ ಹಲವು ಜನಪದ ಕುಣಿತಗಳು ಹಾಗೂ ಮೈಸೂರು ಗುರುರಾಜ್, ಗೊರವರ ಮಲ್ಲಯ್ಯ, ದೇವಾನಂದ ವರಪ್ರಸಾದ್ ಸೇರಿದಂತೆ ಹಲವು ಕಲಾವಿದರು ಜನಪದ ಗೀತೆಗಳನ್ನು ಹಾಡಿದರು.

ಇದಕ್ಕೂ ಮುನ್ನ ರಾಗಿ ಬೀಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಕಾಡೆಮಿ ಅಧ್ಯಕ್ಷರಾದ ಬಿ.ಮಂಜಮ್ಮ ಜೋಗತಿ ಮಾತನಾಡಿ, ‘ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಶಿಕ್ಷಣ ಕೊಡಿಸಬೇಕು. ಅವರಿಗೆ ಕಲೆಯ ಅರಿವು ನೀಡಿ, ಕಲಾವಿದರಾಗಿ ಬೆಳೆಸಬೇಕು’ ಎಂದು ಹೇಳಿದರು.

ADVERTISEMENT

ರಾಜಕಾರಣಿಗಳ ಹಿಂದೆ ಬೀಳದೇ ಕಲೆಯ ಹಿಂದೆ ಬಿದ್ದರೆ ಬಿರುದುಗಳು, ಮನ್ನಣೆಗಳು ತಾವಾಗಿಯೇ ಬರುತ್ತವೆ. ಶ್ರದ್ಧೆ ಮತ್ತು ಭಕ್ತಿಯಿಂದ ಕಲೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದರು.

ನಂತರ ನಡೆದ ‘ಜನಪದ ಜಗುಲಿ’ ವಿಚಾರ ಸಂಕಿರಣದಲ್ಲಿ‘ವಿಶ್ವ ಜಾನಪದ ಪರಿಕಲ್ಪನೆ’ ವಿಷಯಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದ ಮುಖ್ಯಸ್ಥ ಡಾ.ನಂಜಯ್ಯ ಹೊಂಗನೂರು ಮಾತನಾಡಿದರು.

ಜನಪದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲು ಅಕಾಡೆಮಿಗಳನ್ನು ವಿಸ್ತರಿಸಬೇಕು. ಸೊರಗುತ್ತಿರುವ ಜಾನಪದ ವಿಶ್ವವಿದ್ಯಾನಿಲಯವನ್ನು ಉಳಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಮಣಿ ಅವರು ‘ಮಂಟೇಸ್ವಾಮಿ ಕಾವ್ಯದಲ್ಲಿ ಕಲಿಯುಗದ ಪರಿಕಲ್ಪನೆ’ ಕುರಿತು ಮಾತನಾಡಿದರು.

ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಕಾರ್ಖಾನೆಯ ಅಧ್ಯಕ್ಷ ಎನ್.ವಿ.ಫಣೀಶ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‌ಗೌಡ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.