ADVERTISEMENT

ಅಧಿಕಾರವಿದ್ದಾಗ ಕಡೆಗಣಿಸುತ್ತೀರಿ; ಬಲಿಪಶುಗಳನ್ನಾಗಿಸಬೇಡಿ

ಜೆಡಿಎಸ್‌ ಚಿಂತನ–ಮಂಥನ ಸಭೆಯಲ್ಲಿ ಕುಮಾರಸ್ವಾಮಿ ಎದುರು ಮುಖಂಡರ ಒಡಲಾಳದ ಕುದಿ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 16:04 IST
Last Updated 12 ಸೆಪ್ಟೆಂಬರ್ 2019, 16:04 IST

ಮೈಸೂರು: ‘ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಎದುರಾಗಬಹುದು. ಧೈರ್ಯಗುಂದಬೇಡಿ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸೋಣ’ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ, ಮುಖಂಡರು ತಮ್ಮದೇ ಮಾತುಗಳ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡರು ಎಂಬುದು ತಿಳಿದು ಬಂದಿದೆ.

ನಗರದಲ್ಲಿ ಗುರುವಾರ ನಡೆದ ಜೆಡಿಎಸ್‌ನ ಚಿಂತನ–ಮಂಥನ ಗೋಪ್ಯ ಸಭೆಯಲ್ಲಿ ಹಲವು ಮುಖಂಡರು ತಮ್ಮೊಳಗಿನ ಅಸಮಾಧಾನದ ಕುದಿಯನ್ನು ಹೊರಹಾಕಿದರು. ಬರೋಬ್ಬರಿ ಮೂರು ತಾಸು ನಡೆದ ಸಭೆಯುದ್ದಕ್ಕೂ ಆಕ್ರೋಶ ಆಸ್ಫೋಟಗೊಂಡಿತು. ಸಲಹೆಗಳು ಪುಂಖಾನುಪುಂಖವಾಗಿ ಹೊರಹೊಮ್ಮಿದವು ಎನ್ನಲಾಗಿದೆ.

‘ಅಧಿಕಾರದಲ್ಲಿದ್ದಾಗ ಎರಡನೇ ಹಂತದ ಮುಖಂಡರನ್ನು ಸನಿಹಕ್ಕೆ ಬಿಟ್ಟುಕೊಳ್ಳಲ್ಲ. ಭೇಟಿಯಾಗಲು ಬಂದರೂ ಹೋಟೆಲ್‌ನಲ್ಲಿರುತ್ತೀರಿ. ಮೂರ್ನಾಲ್ಕು ಮಂದಿಗೆ ಸೀಮಿತವಾಗಿ ಕೆಲಸ ಮಾಡುತ್ತೀರಿ. ಕಾರ್ಯಕರ್ತರನ್ನಂತೂ ಕಿರುಗಣ್ಣಿನಿಂದಲೂ ನೋಡಲ್ಲ. ನಿಮ್ಮ ಸುತ್ತಲೂ ಪಕ್ಷಕ್ಕೆ ಸಂಬಂಧವಿಲ್ಲದವರೇ ಹೆಚ್ಚಿರುತ್ತಾರೆ. ಇನ್ನಾದರೂ ಬೆರಳೆಣಿಕೆ ಜನಕ್ಕೆ ಸೀಮಿತರಾಗೋದನ್ನು ಬಿಡಿ. ಕಾರ್ಯಕರ್ತರ ಜತೆ ಬೆರೆಯಿರಿ’ ಎಂದು ಬಹುತೇಕರು ನೇರವಾಗಿಯೇ ಕುಮಾರಸ್ವಾಮಿಗೆ ಹೇಳಿದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸರು ಬಹಿರಂಗಗೊಳಿಸಲಿಚ್ಚಿಸದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಾ.ರಾ.ಮಹೇಶ್‌–ಜಿ.ಟಿ.ದೇವೇಗೌಡರ ನಡುವಿನ ಮುನಿಸನ್ನು ಶಮನಗೊಳಿಸಿ. ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿಸಿ. ಇಬ್ಬರ ನಡುವೆ ಕಾರ್ಯಕರ್ತರು ಬಲಿಪಶುಗಳಾಗೋದು ಬೇಡ’ ಎಂದು ಹಲವು ಮುಖಂಡರು ಹೇಳಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.