ADVERTISEMENT

ಸಾಲಿಗ್ರಾಮ: ಕಾಳಮ್ಮದೇವಿ, ಯೋಗನರಸಿಂಹಸ್ವಾಮಿ ರಥೋತ್ಸವ ಸಂಭ್ರಮ

ವಿಶೇಷ ಪೂಜಾ ಕೈಂಕರ್ಯ, ರಥದ ಮೇಲೆ ಹಣ್ಣು, ಧವನ ಎಸೆದು ಭಕ್ತಿ ಮೆರೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:26 IST
Last Updated 2 ಮೇ 2025, 16:26 IST
ಸಾಲಿಗ್ರಾಮ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಗ್ರಾಮದೇವತೆ ಕಾಳಮ್ಮದೇವಿಯ ರಥೋತ್ಸವಕ್ಕೆ ಶುಕ್ರವಾರ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು
ಸಾಲಿಗ್ರಾಮ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಗ್ರಾಮದೇವತೆ ಕಾಳಮ್ಮದೇವಿಯ ರಥೋತ್ಸವಕ್ಕೆ ಶುಕ್ರವಾರ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು   

ಸಾಲಿಗ್ರಾಮ: ತಾಲ್ಲೂಕಿನ ಗಡಿಭಾಗದ ಕಾಳಮ್ಮನಕೊಪ್ಪಲು ಗ್ರಾಮದೇವತೆ ‘ಕಾಳಮ್ಮದೇವಿಯ ರಥೋತ್ಸವ ನೂರಾರು ಮಂದಿ ಜಯ ಘೋಷಣೆಯೊಂದಿಗೆ ಸಡಗರ, ಸಂಭ್ರಮದಿಂದ ನಡೆಯಿತು.

ಕಳೆದು ಮೂರು ದಿನಗಳಿಂದ ಕಾಳಮ್ಮದೇವಿಯ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿ ಕೊಳ್ಳಲಾಗಿತ್ತು. ಶುಕ್ರವಾರ ಮುಂಜಾನೆಯಿಂದಲ್ಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಹಿಳೆಯರು ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ದೇವಾಲಯದ ಹೊರ ಪ್ರಾಂಗಣದಲ್ಲಿ ಹೂವಿನಿಂದ ಮಾಡಿ ನಿಲ್ಲಿಸಲಾಗಿದ್ದ ರಥಕ್ಕೆ ಗುಡ್ಡಪ್ಪ ಕಾಳಮ್ಮದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಶಾಸಕ ಡಿ.ರವಿಶಂಕರ್ ದೇವಿಯ ರಥ ಎಳೆಯುತ್ತಿದ್ದಂತೆ, ನೂರಾರು ಭಕ್ತರು ದೇವಿಗೆ ಜಯ ಘೋಷಣೆ ಕೂಗಿದರು. ರಥವನ್ನು ದೇವಾಲಯ ಸುತ್ತಾ ಭಕ್ತಿಯಿಂದ ಎಳೆದು ತರುವ ವೇಳೆ ಭಕ್ತರು ಹಣ್ಣು ಮತ್ತು ಧವನವನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದರು.

ADVERTISEMENT

ಕಾಳಮ್ಮದೇವಿಯ ರಥವನ್ನು ಭಕ್ತರು ದೇವಾಲಯದ ಸುತ್ತಾ ಎಳೆದು ತರುವ ವೇಳೆ ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ಕೊಳ್ಳುತ್ತಿದ್ದರು. ಕೆಲವು ಮಹಿಳೆಯರು ಇಷ್ಟಾರ್ಥ ಸಿದ್ಧಿಯಾದ ಮೇರೆಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡುವ ಮೂಲಕ ಹರಕೆ ತೀರಿಸುತ್ತಿದ್ದರು. ರಥೋತ್ಸವಕ್ಕೆ ಕಾಳಮ್ಮನ ಕೊಪ್ಪಲಿನ ಅಕ್ಕಪಕ್ಕದ ಭಕ್ತರು ಆಗಮಿಸಿದ್ದರು.

ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಆದ್ದೂರಿ: ಪಟ್ಟಣದ ಪುರಾಣ ಪ್ರಸಿದ್ಧ ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಬೆಳಿಗ್ಗೆ ಸಾವಿರಾರು ಭಕ್ತರ ಜಯ ಘೋಷಣೆಯೊಂದಿಗೆ ಅದ್ದೂರಿಯಾಗಿ ನಡೆಯಿತು.

ಕಳೆದು ನಾಲ್ಕು ದಿನಗಳಿಂದ ದೇವಾಲಯ ಅರ್ಚಕ ಶ್ರೀನಿವಾಸ್‌ ಅಯ್ಯಂಗಾರ್ ನೇತೃತ್ವದಲ್ಲಿ ಯೋಗನರಸಿಂಹಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು.

ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಧ್ಯಾಹ್ನ 12.30ರ ಸಮಯಕ್ಕೆ ಯೋಗನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ದೇವಾಲಯದ ಹೊರ ಪ್ರಾಂಗಣದಲ್ಲಿ ಹೂವಿನಿಂದ ಅಲಂಕೃತಗೊಂಡು ನಿಂತಿದ್ದ ರಥಕ್ಕೆ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೂರಾರು ಭಕ್ತರು ನರಸಿಂಹಸ್ವಾಮಿಗೆ ಜಯ ಘೋಷಣೆ ಕೂಗುತ್ತಾ ಬ್ರಹ್ಮರಥಕ್ಕೆ ಹಣ್ಣು ಮತ್ತು ಧವನವನ್ನು ಭಕ್ತಿಯಿಂದ ಎಸೆದು ರಥ ಎಳೆದರು.

ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಚಿಕ್ಕನಾಯಕನಹಳ್ಳಿ ರಸ್ತೆ ಮೂಲಕ ಓದೇ ಮಾದೇಗೌಡಗಲ್ಲಿ ಮೂಲಕ ಹೊಸಬೀದಿಗೆ ಬರುತ್ತಿದ್ದಂತೆ ಮಹಿಳೆಯರು ಮನೆ ಮುಂದೆ ನೀರು ಹಾಕಿ ರಂಗೋಲಿ ಇಟ್ಟು ಪೂಜೆ ಸಲ್ಲಿಸಿದರು.

ಇಷ್ಟಾರ್ಥ ಸಿದ್ಧಿಯಾದ ಮಹಿಳೆಯರು ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತು, ಪ್ರಸಾದ ವಿತರಣೆ ಮಾಡಿದರು.

ಅವಳಿ ತಾಲ್ಲೂಕಿನ ಶಾಸಕ ಡಿ.ರವಿಶಂಕರ್, ದೇವಾಲಯದ ಧರ್ಮದರ್ಶಿ ಅಂಜನೀಗೌಡ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಸಾಲಿಗ್ರಾಮ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಶಾಸಕ ಡಿ.ರವಿಶಂಕರ್ ಶುಕ್ರವಾರ ಲೋಕಾರ್ಪಣೆ ಮಾಡಿದರು
ಸಾಲಿಗ್ರಾಮ ಪಟ್ಟಣದ ಯೋಗನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಜಯ ಘೋಷಣೆಯೊಂದಿಗೆ ಅದ್ದೂರಿಯಾಗಿ ನಡೆಯಿತು

Cut-off box - ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಿಡುಗಡೆ ಗ್ರಾಮಸ್ಥರು ಮತ್ತು ಯುವಕ ಸಮುದಾಯದ ಸಹಯೋಗದಲ್ಲಿ ಗ್ರಾಮದಲ್ಲಿ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣ ಮಾಡಿಸಿ ರಥೋತ್ಸವದ ಅಂಗವಾಗಿ ಶಾಸಕ ಡಿ.ರವಿಶಂಕರ್ ಅವರಿಂದ ಬಿಡುಗಡೆಗೊಳಿಸಲಾಯಿತು. ನಂತರ ಮಾತನಾಡಿದ ಶಾಸಕರು ವೀರ ಸೇನಾನಿಯ ಪ್ರತಿಮೆಯನ್ನು ಯುವಕರು ಉತ್ಸಾಹದಿಂದ ಬಿಡುಗಡೆಗೊಳಿಸಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಯಣ್ಣ ಗ್ರಾಮದಲ್ಲಿ ನಿಂತಿದಾಗಿದೆ. ಗ್ರಾಮಸ್ಥರು ಸೌಹಾರ್ಧಯುತವಾಗಿ ಒಗ್ಗಟ್ಟಿನಿಂದ ಇರುವ ಜತೆಗೆ ಎಲ್ಲರೊಂದಿಗೂ ಸಹಕಾರ ಮನೋಭಾವನೆಯಿಂದ ಬದುಕು ನಡೆಸಬೇಕು ಎಂದು ಮನವಿ ಮಾಡಿದರು. ಕಾಳಮ್ಮನಕೊಪ್ಪಲು ಗ್ರಾಮದ ಅಭಿವೃದ್ದಿಗೆ ನಾನು ಕಟಿಬದ್ದನಾಗಿದ್ದು ನನ್ನ ಅಧಿಕಾರವಧಿಯಲ್ಲಿ ಹಂತ ಹಂತವಾಗಿ ಗ್ರಾಮದ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಗ್ರಾಮದ ಯಜಮಾನರು ವಿವಿಧ ಸಂಘಗಳ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.