ADVERTISEMENT

ಕನ್ನಡ ವೈದ್ಯ ಬರಹಗಾರರ ಸಮ್ಮೇಳನ 26ರಂದು

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:13 IST
Last Updated 18 ಮೇ 2019, 20:13 IST
ಎಸ್.ಪಿ.ಯೋಗಣ್ಣ
ಎಸ್.ಪಿ.ಯೋಗಣ್ಣ   

ಮೈಸೂರು: ‘ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ವತಿಯಿಂದ ಮೇ 26ರಂದು ಮಂಗಳೂರಿನ ಐಎಂಎ ಸಭಾಂಗಣದಲ್ಲಿ ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ‌ ನಡೆಯಲಿದೆ’ ಎಂದು ಭಾರತ ವೈದ್ಯಕೀಯ ಸಂಘದ ರಾಜ್ಯ ಸಮಿತಿ ವಕ್ತಾರ ಡಾ.ಅಣ್ಣಯ್ಯ ಕುಲಾಲ್ ತಿಳಿಸಿದರು.

ಅಂದು ಬೆಳಿಗ್ಗೆ 10.30ಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಚ್ಚಿದಾನಂದ ಸಮ್ಮೇಳನ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷ ಡಾ.ಅನ್ನದಾನಿ ಮೇಟಿ ಭಾಗವಹಿಸುವರು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಆಯ್ಕೆಯಾಗಿದ್ದಾರೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವೈದ್ಯರು, ವೈದ್ಯಕೀಯ ಸೇವೆ ಮತ್ತು ತಲ್ಲಣಗಳು, ವಿನೋದ ಪ್ರಸಂಗಗಳು, ಕನ್ನಡ ಸಾಹಿತ್ಯಕ್ಕೆ ವೈದ್ಯರ ಕೊಡುಗೆ, ವೈದ್ಯರು ಮತ್ತು ಪತ್ರಿಕಾ ಅಂಕಣಗಳು ಹೀಗೆ ಹಲವು ವಿಷಯಗಳ 6 ಗೋಷ್ಠಿ ನಡೆಯಲಿದೆ. ಡಾ.ನಾ.ಸೋಮೇಶ್ವರ, ಡಾ.ಜಿ.ಕೆ.ಭಟ್, ಡಾ.ಭಾಸ್ಕರ ಆಚಾರ್ಯ, ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಸೇರಿದಂತೆ 300ಕ್ಕೂ ಹೆಚ್ಚು ವೈದ್ಯರು ಭಾಗವಹಿಸುವರು’ ಎಂದು ವಿವರಿಸಿದರು.

ADVERTISEMENT

ಕನ್ನಡ ವೈದ್ಯ ಬರಹಗಾರರೆಲ್ಲರನ್ನು ಸಂಘಟಿಸಿ ವೈದ್ಯಕೀಯ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಸೃಷ್ಟಿಸುವ ಉದ್ದೇಶದಿಂದ ಮತ್ತು ಜನಸಾಮಾನ್ಯರಿಗೆ ಆರೋಗ್ಯ ಕುರಿತ ಸಾಹಿತ್ಯವನ್ನು ತಲುಪಿಸುವ ಉದ್ದೇಶದಿಂದ ಸಂಘವು 2017ರಲ್ಲಿ ‘ಕನ್ನಡ ವೈದ್ಯ ಬರಹಗಾರರ ಬಳಗ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಪ್ರತಿವರ್ಷ ಅತ್ಯುತ್ತಮ ವೈದ್ಯ ಬರಹಗಾರರಿಗೆ ‘ಶ್ರೇಷ್ಠ ವೈದ್ಯ ಸಾಹಿತಿ’ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು, ಡಾ.ಎಸ್.ಪಿ.ಯೋಗಣ್ಣ ಮತ್ತು ಭದ್ರಾವತಿಯ ಡಾ.ವೀಣಾಭಟ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಬಳಗದ ವತಿಯಿಂದ ಕನ್ನಡ ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚಿಸಿ ಮಾರ್ಗಸೂಚಿಗಳನ್ನು ರೂಪಿಸಲು ಈಗ ಕನ್ನಡ ವೈದ್ಯ ಬರಹಗಾರರ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಸಮ್ಮೇಳನದ ಸರ್ವಾಧ್ಯಾಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ‘ಭಾರತೀಯ ವೈದ್ಯಕೀಯ ಸಂಘದ 175 ಶಾಖೆಗಳು ರಾಜ್ಯದಲ್ಲಿದ್ದು, 300ಕ್ಕೂ ಹೆಚ್ಚು ವೈದ್ಯ ಬರಹಗಾರರಿದ್ದಾರೆ. ವೈದ್ಯರ ಸಾಹಿತ್ಯದ ಪ್ರತಿಭೆಗೆ ವೇದಿಕೆ ಒದಗಿಸುವ ಪ್ರಯತ್ನ ಇದಾಗಿದೆ. ಸಮಾಜದಲ್ಲಿ ವೈದ್ಯರು ಎಂದರೆ ಇಂಗ್ಲಿಷ್ ಮಾತನಾಡುವವರು ಎಂಬ ಭಾವನೆ ಇದೆ. ಆದರೆ, ಕನ್ನಡದಲ್ಲಿ ಬಹಳಷ್ಟು ಕವಿಗಳು, ಬರಹಗಾರರಾಗಿ ಗುರುತಿಸಿಕೊಂಡ ವೈದ್ಯರಿದ್ದಾರೆ. ವೈದ್ಯರು ಇಂಗ್ಲಿಷ್‌ನಷ್ಟೇ ಕನ್ನಡಲ್ಲಿಯೂ ಉತ್ತಮವಾಗಿ ಬರೆಯುತ್ತಾರೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನೆಯ ಬಗ್ಗೆ ತರಬೇತಿ ನೀಡುವ ಯೋಜನೆ ಇದೆ’ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆಯ ಅಧ್ಯಕ್ಷ ಡಾ.ಸುರೇಶ್ ರುದ್ರಪ್ಪ, ಕಾರ್ಯದರ್ಶಿ ಡಾ.ಎಂ.ಎಸ್.ಜಯಂತ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.