ADVERTISEMENT

ಕಾರಂಜಿ ಕೆರೆ: ಬಹುತೇಕ ಹೂಳುಮುಕ್ತ, ನೀರಿನಿಂದ ನಳನಳಿಸಲು ಸಿದ್ಧವಾಗುತ್ತಿದೆ

ನೇಸರ ಕಾಡನಕುಪ್ಪೆ
Published 20 ಏಪ್ರಿಲ್ 2019, 20:01 IST
Last Updated 20 ಏಪ್ರಿಲ್ 2019, 20:01 IST
ಕಾರಂಜಿ ಕೆರೆಯ ಅಂಗಳದಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿರುವುದು
ಕಾರಂಜಿ ಕೆರೆಯ ಅಂಗಳದಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿರುವುದು   

ಮೈಸೂರು: ನಗರದ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾದ ಕಾರಂಜಿ ಕೆರೆಯ ಹೂಳೆತ್ತುವ ಕಾರ್ಯ ಬಹುತೇಕ ಮುಗಿಯುತ್ತಿದೆ. ಇದೇ ಗತಿಯಲ್ಲಿ ಕಾಮಗಾರಿ ನಡೆದಲ್ಲಿ ಬರುವ ಮಳೆಗಾಲದಲ್ಲಿ ಕಾರಂಜಿ ಕೆರೆ ನೀರಿನಿಂದ ನಳನಳಿಸಲಿದೆ.

ಕಳೆದ ಎರಡು ದಶಕಗಳಿಂದ ಕೆರೆಯ ಹೂಳೆತ್ತುವ ಕಾರ್ಯ ಆಗಿರಲಿಲ್ಲ. ಕೆಲವೇ ವರ್ಷಗಳ ಹಿಂದೆ ಕೆರೆಯ ಆವರಣ ಅಭಿವೃದ್ಧಿ ಕಾರ್ಯ ನಡೆದಾಗ ಕೆರೆಯಲ್ಲಿದ್ದ ಕಳೆ ಹಾಗೂ ಅಲ್ಪ ಪ್ರಮಾಣದ ಹೂಳನ್ನು ಮಾತ್ರ ತೆರವುಗೊಳಿಸಲಾಗಿತ್ತು. ಇದೀಗ ಕೆರೆಯ ಅಂಗಳವು ಸಂಪೂರ್ಣ ಬತ್ತಿದ್ದು, ಹೂಳು ತೆಗೆಯುವ ಸದವಕಾಶ ಸಿಕ್ಕದೆ. ಕೆರೆಯನ್ನು ನೀರು ತುಂಬಿಸುವ ತೊಟ್ಟಿಯಂತೆ ಮಾಡದೇ, ಕೆರೆಯ ಎಲ್ಲ ನೈಸರ್ಗಿಕ ಗುಣಲಕ್ಷಣಗಳನ್ನು ಉಳಿಸಿಕೊಳ್ಳುವ ಕೆಲಸವನ್ನು ಇಲ್ಲಿ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಹೂಳು ತೆರವು ಮಾತ್ರ:

ADVERTISEMENT

ಕೆರೆಗೆ ಕಳೆದ 2 ವರ್ಷಗಳವರೆಗೂ ಒಳಚರಂಡಿ ನೀರು ಸೇರ್ಪಡೆಯಾಗುತ್ತಿತ್ತು. ಇದು ಈಗ ಸಂಪೂರ್ಣವಾಗಿ ನಿಂತಿದೆ. ಹಾಗಾಗಿ, ಇಗೀಗ ಈ ಕೆರೆಯು ಸಂಪೂರ್ಣವಾಗಿ ಮಳೆ ನೀರು ಆಶ್ರಿತವಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗದ ಕಾರಣ ಕೆರೆಯ ಅಂಗಳ ಬತ್ತಿಹೋಗಿತ್ತು. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಅರಣ್ಯ ಇಲಾಖೆಯು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ. ಪರಿಪರಪ್ರಿಯರು ಹಾಗೂ ತಜ್ಞರನ್ನು ಸಂಪರ್ಕಿಸಿ ವೈಜ್ಞಾನಿಕವಾಗಿ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದೆ.

ಕೆರೆಯ ತಳದಲ್ಲಿರುವ ಸಹಜವಾದ ನೆಲದವರೆಗೆ ಮಾತ್ರ ಹೂಳೆತ್ತಲಾಗುತ್ತಿದೆ. ಕೆರೆಯು ಸಂಪೂರ್ಣ ತುಂಬಿದಾಗ ಆಳವಾದ ಭಾಗದಲ್ಲಿ 10 ಅಡಿಗೂ ಹೆಚ್ಚು ನೀರು ನಿಲ್ಲುತ್ತದೆ. ಆದರೆ, ಸಾಕಷ್ಟು ವರ್ಷಗಳಿಂದ ಇಲ್ಲಿ ಹೂಳು ತೆಗೆಯದೇ ಇರುವ ಕಾರಣ ಕನಿಷ್ಠವೆಂದರೂ ತಳಭಾಗದಿಂದ 2–3 ಅಡಿ ಹೂಳು ನಿಂತಿದೆ. ಕೆರೆಯ ವಿವಿಧ ಭಾಗಗಳಲ್ಲಿ ಒಂದೊಂದು ಎತ್ತರದಲ್ಲಿ ಹೂಳು ಸಂಗ್ರಹವಾಗಿದೆ. ಈ ರೀತಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವುದು ಆದ್ಯತೆಯಾಗಿದೆ.

ಆದರೆ, ಕೆರೆಯ ನೆಲವನ್ನು ಮತ್ತಷ್ಟು ತೋಡಿ ಆಳವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿಲ್ಲ. ‘ಕೆರೆಯನ್ನು ಕೆರೆಯಂತೆಯೇ ಉಳಿಸಿಕೊಳ್ಳುವುದು ನಮ್ಮ ಉದ್ದೇಶ. ಕೆರೆಯ ನೈಸರ್ಗಿಕ ಗುಣಲಕ್ಷಣಗಳು ಉಳಿದುಕೊಳ್ಳಬೇಕು. ಆಗ ಮಾತ್ರ ಸೂಕ್ಷ್ಮ ಜೀವ ಪರಿಸರ ಉಳಿದುಕೊಳ್ಳುವುದು. ಹಾಗಾಗಿ, ವೈಜ್ಞಾನಿಕ ವಿಧಾನ ಅಳವಡಿಕೆಯಾಗಿದೆ. ಹೂಳಿನ ಆಳವನ್ನು ಪತ್ತೆ ಹಚ್ಚುವ ಸಾಧನಗಳ ನೆರವಿನಿಂದ ಪುನರುಜ್ಜೀವನ ಕಾಮಗಾರಿ ನಡೆಸುತ್ತಿದ್ದೇವೆ’ ಎಂದು ಚಾಮರಾಜೇಂದ್ರ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಬಂದರೆ ಕಾಮಗಾರಿ ತಡವಾಗುವುದು. ಹೂಳು ಮೆತ್ತಗಾಗಿ ತೆಗೆಯಲು ಕಷ್ಟವಾಗುವುದು. ಈಗ ಕಾಮಗಾರಿ ಸಾಕಷ್ಟು ಮುಗಿದಿದೆ. ಮಳೆಗಾಲ ಶುರುವಾಗುವ ಒಳಗೆ ಈ ಕಾಮಗಾರಿ ಮುಗಿಸುವ ಆಶಯ ನಮ್ಮದಾಗಿದೆ’ ಎಂದು ಅವರು ಹೇಳಿದರು.

‘ಇದಕ್ಕಾಗಿ ಹಲವು ಕೆರೆಗಳ ಹೂಳೆತ್ತುವ ಕಾರ್ಯಗಳನ್ನು ಮಾದರಿಯನ್ನು ಸ್ವೀಕರಿಸಿದ್ದೇವೆ. ಬೆಂಗಳೂರಿನ ಕೆಲವು ಕೆರೆಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಕಾರಂಜಿ ಕೆರೆಯನ್ನೂ ಅಭಿವೃದ್ಧಿಪಡಿಸುತ್ತಿದ್ದೇವೆ. ಕೆರೆಯನ್ನು ಆಶ್ರಯಿಸಿರುವ ಪಕ್ಷಿಗಳು, ಜೀವ ಸಂಕುಲಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

ಕೆರೆಯು ಒಟ್ಟು 90 ಹೆಕ್ಟೇರ್‌ ಜಾಗದಲ್ಲಿದ್ದು, ಅದರಲ್ಲಿ 55 ಹೆಕ್ಟೇರ್‌ನಲ್ಲಿ ನೀರು ತುಂಬುತ್ತದೆ. ಈ ಭಾಗವನ್ನು ಪರಿಪೂರ್ಣವಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ. ಕರೆಗೆ ಒಂದು ದಿನಕ್ಕೆ ಪ್ರವಾಸಿಗರಿಂದ ಕನಿಷ್ಠ ₹ 50 ಸಾವಿರ ಟಿಕೆಟ್ ಮೂಲದಿಂದ ಆದಾಯ ಸಿಗುತ್ತದೆ. ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ದೃಷ್ಟಿಯಲ್ಲೂ ಅಭಿವೃದ್ಧಿ ಕಾರ್ಯಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.