ADVERTISEMENT

ನಾಳೆಯಿಂದ ಜಿಲ್ಲಾ 18ನೇ ಕಸಾಪ ಸಮ್ಮೇಳನ

ಎಚ್‌.ಡಿ.ಕೋಟೆಯ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 10:04 IST
Last Updated 21 ಫೆಬ್ರುವರಿ 2021, 10:04 IST

ಮೈಸೂರು:ಕನ್ನಡ ಸಾಹಿತ್ಯ ಪರಿಷತ್‌ನ ಮೈಸೂರು ಜಿಲ್ಲಾ ಘಟಕವು ಫೆ.23, 24ರಂದು ‘ಮೈಸೂರು ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಎಚ್‌ಡಿ.ಕೋಟೆಯ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದೆ.

ಸಮ್ಮೇಳನವು ಸಾಹಿತಿ ಪ್ರೊ.ಎನ್‌.ಎಸ್‌.ತಾರಾನಾಥ ಅವರ ಅಧ್ಯಕ್ಷತೆಯಲ್ಲಿ ಚಿಕ್ಕದೇವಮ್ಮ ಮಹಾದ್ವಾರ, ಸುಬ್ಬಯ್ಯನಾಯ್ಡು ಸಭಾಂಗಣದ ಬೆಟ್ಟದಬೀಡು ಸಿದ್ದಶೆಟ್ಟರ ವೇದಿಕೆಯಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.23ರಂದು ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜಾರೋಹಣವನ್ನು ಶಾಸಕ ಅನಿಲ್‌ ಕುಮಾರ್ ಸಿ. ನೆರವೇರಿಸಲಿದ್ದು, ಪರಿಷತ್ತಿನ ಧ್ವಜವನ್ನು ಆ.ವೈ.ಡಿ.ರಾಜಣ್ಣ, ನಾಡಧ್ವಜಾರೋಹಣವನ್ನು ಎಚ್‌.ಡಿ.ಕೋಟೆ ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ ನೆರವೇರಿಸುವರು. ಬೆಳಿಗ್ಗೆ 9ಕ್ಕೆ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ ಚಾಲನೆ ನೀಡುವರು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟಿಸುವರು. ಶಾಸಕ ಅನಿಲ್‌ ಕುಮಾರ್‌ ಸಿ. ಅಧ್ಯಕ್ಷತೆ ವಹಿಸುವರು. ಜಯಪ್ರಕಾಶ್‌ ಪುತ್ತೂರು ಅವರು ‘ಹಮಾರಾ ಪಿಆರ್‌ಒ’, ಸ.ಚ.ಮಹದೇವ ನಾಯಕ ಅವರ ‘ಸರಗೂರು ಸಂಪಿಗೆ’, ಕಿರಣ್‌ ಸಿಡ್ಲೇಹಳ್ಳಿ ಅವರ ‘ಭಾವಕಿರಣ’ ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಸಾಮಸ್ಕೃತಿಕ ಕಾರ್ಯಕ್ರಮಗಳನ್ನು ಸಂಸದ ವಿ.ಶ್ರೀನಿವಾಸಪ್ರಸಾದ್‌, ಪುಸ್ತಕ ಮಳಿಗೆಗಳನ್ನು ಸಂಸದ ಪ್ರತಾಪಸಿಂಹ, ಚಿತ್ರಕಲಾ ಪ್ರದರ್ಶನವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ಎಸ್‌.ರಾಜಪ್ಪ ಭಾಗವಹಿಸುವರು ಎಂದು ತಿಳಿಸಿದರು.

ಮಧ್ಯಾಹ್ನ 2.30ಕ್ಕೆ ನಡೆಯುವ ಹೆಗ್ಗಡದೇವನಕೋಟೆ ತಾಲ್ಲೂಕು ದರ್ಶನ ವಿಚಾರಗೋಷ್ಠಿಯನ್ನು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಉದ್ಘಾಟಿಸುವರು. ಸಾಹಿತಿ ಕ್ಷೀರಸಾಗರ ಅಧ್ಯಕ್ಷತೆ ವಹಿಸಲಿದ್ದು, ಬುಡಕಟ್ಟು ಸಂಸ್ಕೃತಿ– ಒಂದು ಹಿನ್ನೋಟ, ತಾಲ್ಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆ–ಹಿನ್ನೆಲೆ ಕುರಿತು ಡಾ.ಸಿ.ಎಸ್‌.ಕೆಂಡಗಣ್ಣೇಗೌಡ ವಿಚಾರಮಂಡಿಸುವರು. ಶೋಷಿತ ಸಮುದಾಯಗಳ ಸ್ಥಿತಿಗತಿ ಕುರಿತು ಶಿಕ್ಷಕ ಕೆಂಪರಾಜು ವಿಚಾರ ಮಂಡಿಸುವರು.

ಸಂಜೆ 4ಕ್ಕೆ ನಡೆಯುವ ಮೈಸೂರಿನ ವಿದ್ವತ್‌ ಪರಂಪರೆ ವಿಶೇಷ ಉಪನ್ಯಾಸದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕರಾದ ಡಾ.ಜ್ಯೋತಿಶಂಕರ್‌ ವಿಚಾರ ಮಂಡಿಸಲಿದ್ದು, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್‌ ಭಾಗವಹಿಸುವರು ಎಂದರು.

ಸಂಜೆ 4.45ರಿಂದ ನಡೆಯುವ ಕವಿಗೋಷ್ಠಿಯನ್ನು ವಿಶ್ರಾಮತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಉದ್ಘಾಟಿಸಲಿದ್ದು, ಕನ್ನಡ ಉಪನ್ಯಾಸಕ ನೀ.ಗೂ.ರಮೇಶ್‌ ಆಶಯ ನುಡಿ ನುಡಿಯಲಿದ್ದಾರೆ. ಸಂಜೆ 6ರಿಂದ ಸಾಂಸ್ಕೃತಿಕ ಸಂಭ್ರಮ ನಡೆಯಲಿದ್ದು, ಎಚ್‌.ಡಿ.ಕೋಟೆಯ ಕಪಿಲಾ ಕಲಾವಿದರ ಟ್ರಸ್ಟ್‌ ಸದಸ್ಯರಿಂದ ಕನ್ನಡ ಗೀತ ಗಾಯನ ನಡೆಯಲಿದೆ. 6.30ರಿಂದ ಗಂಗಾವತಿ ಪ್ರಾಣೇಶ್‌, ನರಸಿಂಹಜೋಷಿ, ಬಸವರಾಜ್‌ ಮಹಾಮನಿ ಅವರಿಂದ ಹಾಸ್ಯಸಂಜೆ ನಡೆಯಲಿದೆ.

ಫೆ.24ರಂದು ಬೆಳಿಗ್ಗೆ 10ರಿಂದ ಸಿದ್ದರಾಜು ಮತ್ತು ತಂಡದಿಂದ ಭಾವಗೀತ ಗಾಯನ ನಡೆಯಲಿದೆ. ಬೆಳಿಗ್ಗೆ 10ರಿಂದ ಮೈಸೂರು ಜಿಲ್ಲೆಯ ಜಾನಪದ ಪರಂಪರೆ ಗೋಷ್ಠಿ ನಡೆಯಲಿದ್ದು, ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ಅಧ್ಯಕ್ಷತೆ ವಹಿಸುವರು. ಬೆಟ್ಟದಬೀಡು ಸಿದ್ಧಶೆಟ್ಟರ ‘ಧರೆಗೆ ದೊಡ್ಡವರು ಮಂಟೇಸ್ವಾಮಿ’– ಜನಪದ ಮಹಾಕಾವ್ಯ ಕುರಿತು ಪ್ರಾಧ್ಯಾಪಕ ಡಾ.ಮೈಸೂರು ಕೃಷ್ಣಮೂರ್ತಿ, ‘ಪಿರಿಯಾಪಟ್ಟಣ ಕಾಳಗ’ ಜನಪದ ಕಾವ್ಯ ಕುರಿತು ಸಹ ಪ್ರಾಧ್ಯಾಪಕ ಡಾ.ದ.ಸತೀಶ್‌ಚಂದ್ರ, ಬೆಟ್ಟದ ಚಾಮುಂಡಿ– ಜನಪದ ಕಾವ್ಯ ಕುರಿತು ಡಾ.ವಿಜಯಲಕ್ಷ್ಮಿ ಮನಾಪುರ ವಿಚಾರ ಮಂಡಿಸುವರು.

ಮಧ್ಯಾಹ್ನ 12.30ರಿಂದ ಲಕ್ಷ್ಮೀರಾಂ ಅವರಿಂದ ಜಾನಪದ ಗಾಯನ, ಗಿರಿಜನ ಆಶ್ರಮ ಶಾಲೆ ವಿದ್ಯಾರ್ಥಿಗಳಿಂದ ಲಾವಣಿಪದ ಗಾಯನ ನಡೆಯಲಿದೆ. ಮಧ್ಯಾಹ್ನ 1ರಿಂದ ಕಾವೇರಿ ಜಲ ಸಮಸ್ಯೆ– ಇತ್ತೀಚಿನ ಬೆಳವಣಿಗೆಗಳು ಕುರಿತು ಜಲತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ವಿಚಾರ ಮಂಡಿಸುವರು. ಮಧ್ಯಾಹ್ನ 2ರಿಂದ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 2.30ರಿಂದ ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ಅಧ್ಯಕ್ಷತೆಯಲ್ಲಿ ಸಂಕೀರ್ಣಗೋಷ್ಠಿ ನಡೆಯಲಿದೆ. ಮಹಿಳೆ ಮತ್ತು ಉದ್ಯೋಗರಂಗ ಕುರಿತು ಪ್ರೊ.ಡಾ.ಎಸ್‌.ಡಿ.ಶಶಿಕಲಾ, ಕನ್ನಡ ಸಾಹಿತ್ಯ ಮತ್ತು ವಿದ್ಯುನ್ಮಾನ ಮಾಧ್ಯಮ ಕುರಿತು ಸಹ ಪ್ರಾಧ್ಯಾಪಕ ಡಾ.ಚಿಕ್ಕಮಗಳೂರು ಗಣೇಶ್‌, ಕನ್ನಡ ಭಾಷಾ ವರದಿಗಳು ಕುರಿತು ಸಹಾಯಕ ಪ್ರಾಧ್ಯಾಪಕಿ ಡಾ.ಶಿಲ್ಪಶ್ರೀ ಹರವು ವಿಚಾರ ಮಂಡಿಸುವರು. ಶಿಕ್ಷಣ ರಂಗದ ಸವಾಲುಗಳು ಕುರಿತು ಸಂಜೆ 4ರಿಂದ ನಡೆಯುವ ಗೋಷ್ಠಿಯಲ್ಲಿ ಚಿಂತಕ ಪ್ರೊ.ಎಚ್‌.ಎಸ್‌.ಉಮೇಶ್‌ ವಿಚಾರ ಮಂಡಿಸುವರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಫೆ.24ರಂದು ಸಂಜೆ 4.30ರಿಂದ ನಡೆಯುವ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅನಿಲ್‌ ಕುಮಾರ್ ಸಿ. ವಹಿಸುವರು. ಮಾಜಿ ಸಂಸದ ಆರ್‌.ಧ್ರುವನಾರಾಯಣ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಲೇಖಕ ಪ್ರೊ.ನೀ.ಗಿರಿಗೌಡ, ಮಾಜಿ ಶಾಸಕ ಸಿದ್ದರಾಜು ಭಾಗವಹಿಸುವರು. ವಿವಿಧ ಕ್ಷೇತ್ರದ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದರು.

ಸಂಜೆ 5.30ರಿಂದ ಸಮಾರೋಪ ನಡೆಯಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್‌ ಹಂಚೆ ಸಮಾರೋಪ ಭಾಷಣ ಮಾಡುವರು. ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಪ್ರೊ.ಎನ್‌.ಎಸ್.ತಾರಾನಾಥ್‌ ಅವರು ಮಾತನಾಡಲಿದ್ದಾರೆ.

ಸಂಸದರು, ಶಾಸಕರು ಭಾಗವಹಿಸುವರು. ಸಂಜೆ 6.30ರಿಂದ ಸಾಂಸ್ಕೃತಿಕ ಸಂಭ್ರಮ ನಡೆಯಲಿದ್ದು, ಕಳಸೂರು ರಾಜು ತಂಡದವರಿಂದ ಜಾನಪದ ಗಾನಯಾನ ನಡೆಯಲಿದೆ. ಸಂಜೆ 7ರಿಂದ ಹುಣಸೂರಿನ ಕುಮಾರ್‌ಅರಸೇಗೌಡ ಬಳಗದಿಂದ ಹಾಸ್ಯರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ವೈ.ಡಿ.ರಾಜಣ್ಣ ಮಾಹಿತಿ ನೀಡಿದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ.ಜಯಪ್ಪ ಹೊನ್ನಾಳಿ, ಕೆ.ಎಸ್‌.ನಾಗರಾಜು, ನಿಕಟಪೂರ್ವ ಅಧ್ಯಕ್ಷರಾದ ಎಂ.ಚಂದ್ರಶೇಖರ್‌, ಮಡ್ಡೀಕೆರೆ ಗೋಪಾಲ್‌, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ನಗರ ಘಟಕದ ಅಧ್ಯಕ್ಷ ಕೆ.ಎಸ್‌.ಶಿವರಾಂ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.