ADVERTISEMENT

ಕೆಪಿಎಸ್‌ಸಿ | ಆಯ್ಕೆ ಪಟ್ಟಿ ನಾಪತ್ತೆ; ಉನ್ನತ ತನಿಖೆಗೆ ವಿಶ್ವನಾಥ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 4:46 IST
Last Updated 1 ಏಪ್ರಿಲ್ 2024, 4:46 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌   

ಮೈಸೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಿಂದ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಆಯ್ಕೆ ಪಟ್ಟಿ ನಾಪತ್ತೆಯಾದ ಪ್ರಕರಣ ಗಂಭೀರವಾಗಿದ್ದು, ಸಿಬಿಐನಂಥ ಉನ್ನತ ಸಂಸ್ಥೆಯಿಂದ ತನಿಖೆ ನಡೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಿ ಕಳುವಾಗಿದೆ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಆಯೋಗದ ನಡೆ ಅನುಮಾನಾಸ್ಪದವಾಗಿದೆ. ಈ ಡಿಜಿಟಲ್‌ ಯುಗದಲ್ಲಿ ಇಂಥ ಬೇಜವಾಬ್ದಾರಿ ಹೇಗೆ ಸಾಧ್ಯ? ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳ ಕೈವಾಡವಿದ್ದು, ರಾಜ್ಯ ಪೊಲೀಸರಿಂದ ಸತ್ಯ ಹೊರತರಲು ಸಾಧ್ಯವೇ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಆಯೋಗ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಈ ಪ್ರಕರಣದ ಬಗ್ಗೆ ಅವರು ಮೌನವಾಗಿರುವುದೇಕೆ? ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಎಲ್ಲಿದ್ದೀಯಪ್ಪ. ನೇಮಕಾತಿ ನಿರೀಕ್ಷೆಯಲ್ಲಿರುವ ಯುವ ಜನರ ಭವಿಷ್ಯದ ಬಗ್ಗೆ ಕಾಳಜಿಯಿಲ್ಲವೇ? ಆಯೋಗವನ್ನು ಸುಧಾರಿಸಲು ಇದೇ ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ, ಹೊಂದಿದ ನಿಲುವುಗಳು ಇಂದು ಏನಾಗಿವೆ. ನಾಡಿನ ಜನರನ್ನು ಮೂರ್ಖರೆಂದುಕೊಂಡಿದ್ದೀರಾ’ ಎಂದು ಕೇಳಿದರು.

ADVERTISEMENT

2 ದಿನಗಳಲ್ಲಿ ತೀರ್ಮಾನ: ಪತ್ರಿಕಾಗೋಷ್ಠಿ ಪ್ರಾರಂಭದಲ್ಲಿಯೇ ಯಾವುದೇ ರಾಜಕೀಯ ವಿಚಾರ ಮಾತನಾಡುವುದಿಲ್ಲ ಎಂದು ಹೇಳಿದ ವಿಶ್ವನಾಥ್ ಅವರು, ‘ಇನ್ನೆರಡು ದಿನದಲ್ಲಿ ನನ್ನ ರಾಜಕೀಯ ತೀರ್ಮಾನಗಳ ಬಗ್ಗೆ ತಿಳಿಸುತ್ತೇನೆ. ಯಾವ ಪಕ್ಷದಲ್ಲಿದ್ದೇನೆ, ಯಾವ ಪಕ್ಷಕ್ಕೆ ಹೋಗುತ್ತೇನೆ. ಎಲ್ಲವನ್ನು ಮಾತನಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.