ಮೈಸೂರು: ದೀಪಾವಳಿ ಸಂದರ್ಭ ಪಟಾಕಿ ಸಿಡಿತದಿಂದ ಗಾಯಗೊಳ್ಳುವವರಿಗೆ ತುರ್ತು ಚಿಕಿತ್ಸೆ ನೀಡಲು ಕೆ.ಆರ್. ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗವು ಸಜ್ಜಾಗಿದ್ದು, 40 ಹಾಸಿಗೆಗಳನ್ನು ಇದಕ್ಕಾಗಿಯೇ ಮೀಸಲಿಟ್ಟಿದೆ.
‘ಪಟಾಕಿ ಸಿಡಿತದ ವೇಳೆ ಮಕ್ಕಳು, ವಯಸ್ಕರು ಗಾಯಗೊಳ್ಳುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಕೆ.ಆರ್. ಆಸ್ಪತ್ರೆಯ ಕಣ್ಣಿನ ಚಿಕಿತ್ಸೆ ವಿಭಾಗಕ್ಕೆ ಹೊರ ರೋಗಿಗಳು ಬರುತ್ತಾರೆ. ಬಂದವರಿಗೆ ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಣ್ಣುಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಅಗತ್ಯ ಬಿದ್ದವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ’ ಎಂದು ವೈದ್ಯರು ಮಾಹಿತಿ ನೀಡಿದರು.
‘40 ಹಾಸಿಗೆಗಳ ಜೊತೆಗೆ ದಿನದ 24 ತಾಸು ವೈದ್ಯರ ಸೇವೆ ಲಭ್ಯವಿದೆ. ತುರ್ತು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಕೊಠಡಿಗಳನ್ನೂ ಸಜ್ಜಾಗಿ ಇಟ್ಟಿದ್ದೇವೆ’ ಎಂದರು.
ಮಕ್ಕಳ ಜೊತೆಯಿರಿ:
‘ಮಕ್ಕಳ ಕೈಗೆ ನೇರವಾಗಿ ಪಟಾಕಿ ಕೊಡಬಾರದು. ಪೋಷಕರು ಕಡ್ಡಾಯವಾಗಿ ಜೊತೆಯಲ್ಲಿ ಇರಬೇಕು. ಕಣ್ಣಿಗೆ ಹಾನಿಯಾದಲ್ಲಿ ಕೈಯಿಂದ ಉಜ್ಜಬಾರದು. ಮೊದಲು ಸ್ವಚ್ಛವಾದ ನೀರಿನಿಂದ ಕಣ್ಣನ್ನು ತೊಳೆಯಬೇಕು. ತಕ್ಷಣದಲ್ಲಿ ಕೆ.ಆರ್. ಆಸ್ಪತ್ರೆ ಸಹಿತ ಸಮೀಪದ ಯಾವುದೇ ಕಣ್ಣಿನ ಆಸ್ಪತ್ರೆಯನ್ನು ಸಂಪರ್ಕಿಸಬೇಕು’ ಎನ್ನುತ್ತಾರೆ ಕೆ.ಆರ್. ಆಸ್ಪತ್ರೆಯ ವೈದ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.