ADVERTISEMENT

ಕೆ.ಆರ್.ನಗರ | ಗ್ಯಾರಂಟಿ ಯೋಜನೆಯಿಂದ ಜೀವನ ಮಟ್ಟ ಸುಧಾರಣೆ: ಎಂ.ಎಸ್.ಮಹದೇವ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:35 IST
Last Updated 20 ಜೂನ್ 2025, 14:35 IST
ಕೆ.ಆರ್.ನಗರ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮಹದೇವ್ ಅವರು ಗುರುವಾರ ಮನೆ ಮನೆಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು. ವಿ.ಪಿ.ಕುಲದೀಪ್, ಉದಯಶಂಕರ್, ಸಯ್ಯದ್ ಜಾಬೀರ್ ಪಾಲ್ಗೊಂಡಿದ್ದರು
ಕೆ.ಆರ್.ನಗರ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮಹದೇವ್ ಅವರು ಗುರುವಾರ ಮನೆ ಮನೆಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು. ವಿ.ಪಿ.ಕುಲದೀಪ್, ಉದಯಶಂಕರ್, ಸಯ್ಯದ್ ಜಾಬೀರ್ ಪಾಲ್ಗೊಂಡಿದ್ದರು   

ಕೆ.ಆರ್.ನಗರ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಹಲವರ ಬದುಕು ಸುಧಾರಿಸುವ ಕೆಲಸ ಮಾಡಿದೆ’ ಎಂದು ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮಹದೇವ್ ಹೇಳಿದರು.

ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಗುರುವಾರ ಆಯೋಜಿಸಿದ್ದ ‘ಗ್ಯಾರಂಟಿ ಯೋಜನೆಗಳ ಅರಿವು ಶಿಬಿರ’ದಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅರ್ಹ ಫಲಾನುಭವಿಗಳು ರಾಜ್ಯದಾದ್ಯಂತ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಅರ್ಹರಿಗೆ ಸೌಲಭ್ಯ ತಲುಪುತ್ತಿದೆಯಾ ಎಂದು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಯೋಜನೆಗಳು ತಲುಪದೇ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಬಳಿ ತೆರಳಿ ಅಗತ್ಯ ದಾಖಲೆಗಳನ್ನು ನೀಡಿ ಫಲಾನುಭವಿ ಆಗಬಹುದು’ ಎಂದರು.

ಸಾಲಿಗ್ರಾಮ ತಾಲ್ಲೂಕು ಸಮಿತಿ ಅಧ್ಯಕ್ಷ ಉದಯಶಂಕರ್ ಮಾತನಾಡಿ, ‘ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಜನರ ಜೀವನ ಮಟ್ಟ ಸುಧಾರಿಸಿದೆ. ಬದುಕು ಬದಲಾಯಿಸಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿ.ಪಿ.ಕುಲದೀಪ್ ಮಾತನಾಡಿ, ‘ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಮೂರು ಹಂತಗಳಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ತಿಂಗಳು ಸಭೆ ಕರೆದು ಯೋಜನೆಗಳು ಅರ್ಹರಿಗೆ ತಲುಪುತ್ತಿರುವ ಬಗ್ಗೆ ಖಾತರಿ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಸರ್ಕಾರಕ್ಕೆ ವರದಿ ನೀಡಲಾಗುತ್ತಿದೆ’ ಎಂದರು.

ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಲತಾ ಮಾತನಾಡಿದರು. ಕಾಂಗ್ರೆಸ್ ವಕ್ತಾರ ಸಯ್ಯದ್ ಜಾಬೀರ್, ಸಮಿತಿ ನಿರ್ದೇಶಕರಾದ ನಂದೀಶ್, ಗಂಗಾಧರ್, ಜಯಮ್ಮ, ಲತಾ, ಮಂಜುನಾಥ್, ಚೇತನ್, ಕುಮಾರ್, ಸೋಮಣ್ಣ, ಮೋಹನ್, ಯತಿರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ, ಉಪಾಧ್ಯಕ್ಷೆ ಭಾಗ್ಯಾ, ಸದಸ್ಯರಾದ ರಾಮಚಂದ್ರೇಗೌಡ, ಪ್ರಾಣೇಶ್, ಪುಟ್ಟಲಕ್ಷ್ಮಮ್ಮ, ರೇಖಾ, ಮುಖಂಡ ರಾಮಾಚಾರಿ, ಚಿಕ್ಕಕಾಳೇಗೌಡ, ಕೌಶಲಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೆಸ್ಕ್, ಕೆಎಸ್ಆರ್‌ಟಿಸಿ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.