ಎಚ್.ಡಿ.ಕೋಟೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಲಕ್ಷ್ಮೀ ವರದರಾಜ ಸ್ವಾಮಿ ದೇವಾಲಯದ 13ನೇ ವರ್ಷದ ಬ್ರಹ್ಮರಥೋತ್ಸವ ಬುಧವಾರ ನಡೆಯಲಿದೆ.
ಆದ್ದೂರಿ ಆಚರಣೆಗೆ ದೇವಸ್ಥಾನ ಸಮಿತಿ, ತಾಲ್ಲೂಕು ಆಡಳಿತ ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದೆ. ಯುಗಾದಿ ಹಬ್ಬದ ನಂತರ ಪಟ್ಟಣದಲ್ಲಿ ನಡೆಯುತ್ತಿರುವ ರಥೋತ್ಸವ ಇದಾಗಿದೆ.
ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದಲ್ಲಿನ ವರದರಾಜ ಸ್ವಾಮಿ, ಶ್ರೀದೇವಿ, ಭೂದೇವಿ ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿ ಮೆರವಣಿಗೆ ನಡೆಸಲಾಗುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕು, ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಪುರಾತನ ದೇವಸ್ಥಾನದ ಅಭಿವೃದ್ಧಿಯನ್ನು ಮುಜರಾಯಿ ಇಲಾಖೆ, ಸರ್ಕಾರ ಮತ್ತು ದಾನಿಗಳ ಮುಖಾಂತರ ₹2 ಕೋಟಿ ವೆಚ್ಚದಲ್ಲಿ ಈಚೆಗೆ ನಡೆಸಲಾಗಿದೆ. ಸಮಿತಿಯ ಮುಖಂಡರು ಬ್ರಹ್ಮರಥೋತ್ಸವ ಸಿದ್ಧತೆಯಲ್ಲಿ ಪಾಲ್ಗೊಂಡಿದ್ದಾರೆ.
ಬ್ರಹ್ಮರಥೋತ್ಸವದ ಅಂಗವಾಗಿ ಕಳೆದ ಏಪ್ರಿಲ್ 29ರಿಂದ ಮೇ 10ರವರೆಗೆ ದೇವಸ್ಥಾನದಲ್ಲಿ ಎಲ್ಲಾ ಸಮುದಾಯದವರು ಸೇರಿ ವಿಶೇಷ ಪೂಜೆ, ಹವನ, ಅಭಿಷೇಕ, ಅಲಂಕಾರ ಮತ್ತಿತರ ಸೇವೆ ನಡೆಸಲಾಗುತ್ತಿದೆ.
12 ದಿನಗಳ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಸ್.ರಂಗ ಅಯ್ಯಂಗಾರ್, ತಹಶೀಲ್ದಾರ್ ಶ್ರೀನಿವಾಸ, ಪುರಸಭಾ ಅಧ್ಯಕ್ಷೆ ಶಿವಮ್ಮ ಚಾಕಳ್ಳಿ ಕೃಷ್ಣ, ರಥೋತ್ಸವ ನಿರ್ವಹಣಾ ಮಂಡಳಿಯ ಅಧ್ಯಕ್ಷ ಸಿ.ಎನ್.ನಾಗಣ್ಣ, ತಿರುಮಲಾಚಾರ್, ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ಪಾಲ್ಗೊಳ್ಳುವರು.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ 12 ದಿನ ವಿಶೇಷ ಪೂಜಾ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.