ADVERTISEMENT

ವಿಧಾನಪರಿಷತ್‌ ಚುನಾವಣೆ: ಜಿಟಿಡಿ ನೇತೃತ್ವದಲ್ಲೇ ಎದುರಿಸುವೆವು: ಸಾ.ರಾ.ಮಹೇಶ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 10:48 IST
Last Updated 13 ನವೆಂಬರ್ 2021, 10:48 IST
   

ಮೈಸೂರು: ‘ಮುಂಬರುವ ವಿಧಾನಪರಿಷತ್‌ ಚುನಾವಣೆಯನ್ನು ಮೈಸೂರಿನಲ್ಲಿ ಜಿ.ಟಿ.ದೇವೇಗೌಡ ನೇತೃತ್ವದಲ್ಲೇ ಎದುರಿಸುತ್ತೇವೆ. ಅವರ ಮನೆಯ ಸದಸ್ಯರೊಬ್ಬರು ಅಭ್ಯರ್ಥಿ ಆಗಲೂಬಹುದು’ ಎಂದು ಶಾಸಕ ಸಾ.ರಾ.ಮಹೇಶ್‌ ಅಚ್ಚರಿಯ ಹೇಳಿಕೆ ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು–ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಇದ್ದಾರೆ. ಪಕ್ಷದ ವರಿಷ್ಠರು ಅವರೆಲ್ಲರನ್ನೂ ಬಿಟ್ಟು, ಅಚ್ಚರಿಯ ಆಯ್ಕೆ ನಡೆಸುವ ಸಾಧ್ಯತೆಯೂ ಇದೆ’ ಎಂದರು.

ಜಿ.ಟಿ.ದೇವೇಗೌಡ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಂಡದ್ದರ ಬಗ್ಗೆ ಪ್ರತಿಕ್ರಿಯಿಸಿ, ‘ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಗೆದ್ದವರು, ಸೋತವರು ಒಟ್ಟಿಗೆ ಇರಬೇಕು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಸ್ವತಃ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಆದ್ದರಿಂದ ಚುನಾವಣೆಗೆ ಅವರೇ ನೇತೃತ್ವ ವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮೈಸೂರಿನಲ್ಲಿ ಜೆಡಿಎಸ್‌ಗೆ ಜಿ.ಟಿ.ದೇವೇಗೌಡ ಅವರೇ ನಾಯಕರು. ಕಳೆದ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರನ್ನೇ ಅವರು ಸೋಲಿಸಿದ್ದಾರೆ. ನಮ್ಮ ಕಾರ್ಯಕರ್ತರ ಸಂಪೂರ್ಣ ಬೆಂಬಲ ಅವರಿಗಿದೆ. ಕಾರ್ಯಕರ್ತರು ಕೂಡಾ ಅವರ ಬೆಂಬಲ ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ’ ಎಂದರು.

‘ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ವಿಚಾರ ಈಗ ಅಪ್ರಸ್ತುತ. 2016ರ ಚುನಾವಣೆಯ ಬೆನ್ನ‌ಲ್ಲೇ ಅವರು ಪಕ್ಷದಿಂದ ದೂರ ಹೋಗಿದ್ದಾರೆ. ನಮ್ಮ ಜತೆ ಗುರುತಿಸಿಕೊಂಡಿಲ್ಲ. ಇದರಿಂದ ಪಕ್ಷಕ್ಕೆ ಹಿನ್ನಡೆ ಆಗದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.