
ಬೆಳಗನಹಳ್ಳಿ ಗ್ರಾಮದ ಸೋಮಶೇಖರ್ ರವರ ತೋಟದ ಮನೆಗೆ ಚಿರತೆ ಬಂದಿರುವುದರಿಂದ ಅರಣ್ಯ ಇಲಾಖಾ ಸಿಬ್ಬಂದಿ ಭೋನನ್ನು ಇಟ್ಟಿರುವುದು
ಹಂಪಾಪುರ: ಬೆಳಗನಹಳ್ಳಿ ಗ್ರಾಮದ ತೋಟದ ಮನೆಗೆ ನುಗ್ಗಿದ ಚಿರತೆಯೊಂದು ತಾಯಿ ಬೆಕ್ಕು ಹಾಗೂ ನಾಲ್ಕು ಮರಿ ಬೆಕ್ಕುಗಳನ್ನು ಕೊಂದುಹಾಕಿದೆ.
ಗ್ರಾಮದ ಸೋಮಶೇಖರ್ ಅವರ ಜಮೀನಿನ ಮನೆಯಲ್ಲಿ ರಾತ್ರಿ 11.30ರ ಸಮಯದಲ್ಲಿ ಚಿರತೆ ಬಂದು ಹೋಗಿರುವ, ಎರಡು ಅಂತಸ್ತಿನ ಮನೆಯ ಮೆಟ್ಟಿಲು ಹತ್ತಿ ಇಳಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸೋಮಶೇಖರ್ ಅವರ ಪುತ್ರ ರಾತ್ರಿ ಶುಂಠಿಗೆ ನೀರು ಹಾಯಿಸಿ ವಾಪಸ್ ಬಂದಾಗ ಮನೆಯ ಬೆಕ್ಕು ಕಾಣದಿದ್ದಾಗ ಸಿ.ಸಿ. ಕ್ಯಾಮೆರಾವನ್ನು ಪರಿಶೀಲಿಸಿದಾಗ ಚಿರತೆ ಮನೆ ಸಮೀಪ ಬಂದಿರುವುದು ಹಾಗೂ ಮೆಟ್ಟಿಲುಗಳನ್ನು ಸರಾಗವಾಗಿ ಹತ್ತಿ ಇಳಿದಿರುವುದು ಕಂಡುಬಂದಿದೆ. ವಿಷಯ ಗಮನಕ್ಕೆ ಬರುತ್ತಿದ್ದಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಚಾರಣೆ ಆರಂಭಿಸಿದ ಅರಣ್ಯ ಸಿಬ್ಬಂದಿ ಹೆಜ್ಜೆ ಗುರುತುಗಳ ಆಧಾರದ ಮೇಲೆ ಚಿರತೆ ಸೆರೆಗೆ ಬೋನು ಇಟ್ಟಿದ್ದಾರೆ.
ಎಚ್.ಡಿ. ಕೋಟೆ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ರವಿಕುಮಾರ್ ಮಾತನಾಡಿ, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ಚಿರತೆ ಸೆರೆಗೆ ಬೋನು ಇಡಲಾಗಿದೆ. ಈ ಭಾಗದಲ್ಲಿ ಸಂಚರಿಸುವ ರೈತರು ಎಚ್ಚರಿಕೆಯಿಂದಿರಬೇಕು. ಅಲ್ಲದೇ ರಾತ್ರಿ ವೇಳೆ ಒಬ್ಬಬ್ಬರೇ ತೆರಳದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದರು.
ತೋಟದ ಮನೆಯ ಮಾಲೀಕ ಸೋಮಶೇಖರ್ ಅವರ ಪುತ್ರ ಪ್ರೇಮ್‌ಕುಮಾರ್ ಮಾತನಾಡಿ, ರಾತ್ರಿ ವೇಳೆ ಪಂಪಸೆಟ್‌ಗೆ ವಿದ್ಯುತ್ ನೀಡುವುದರಿಂದ ಸಮಸ್ಯೆಯಾಗಿದೆ. ಬೆಳಿಗ್ಗೆ ವಿದ್ಯುತ್ ನೀಡಿದರೆ ಅನುಕೂಲ ಎಂದರು. ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ಮಾನವ ಮತ್ತು ಪ್ರಾಣಿ ಸಂಘರ್ಷ ತೀವ್ರವಾಗಿದ್ದು, ಜನರು ಆತಂಕದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.