ADVERTISEMENT

ನಗರ ಗ್ರಂಥಾಲಯ ಪ್ರಾಧಿಕಾರದ ನಿಧಿಗೆ ನಗರಪಾಲಿಕೆಯಿಂದ ₹ 16.87 ಕೋಟಿ ಬಾಕಿ

ನಿಧಿ ಕ್ಷೀಣ; ನಿರ್ವಹಣೆ ದುಸ್ತರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 11:51 IST
Last Updated 22 ಡಿಸೆಂಬರ್ 2018, 11:51 IST
ಮೈಸೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಶನಿವಾರ ನಡೆದ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಬಿ.ಮಂಜುನಾಥ್‌ ಮಾತನಾಡಿದರು. ಮೇಯರ್‌ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌ ಇದ್ದಾರೆ
ಮೈಸೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಶನಿವಾರ ನಡೆದ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಬಿ.ಮಂಜುನಾಥ್‌ ಮಾತನಾಡಿದರು. ಮೇಯರ್‌ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌ ಇದ್ದಾರೆ   

ಮೈಸೂರು: ನಗರ ಗ್ರಂಥಾಲಯ ಪ್ರಾಧಿಕಾರದ ನಿಧಿಗೆ ಮೈಸೂರು ಮಹಾನಗರಪಾಲಿಕೆಯು ₹ 16.87 ಕೋಟಿ ಸೆಸ್‌ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಗ್ರಂಥಾಲಯಗಳ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಬಿ.ಮಂಜುನಾಥ್‌ ಅಳಲು ತೋಡಿಕೊಂಡರು.

ನಗರಪಾಲಿಕೆಯಲ್ಲಿ ಮೇಯರ್‌ ಪುಷ್ಪಲತಾ ಜಗನ್ನಾಥ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಇದುವರೆಗೆ ನಗರಪಾಲಿಕೆಯು ಕೇವಲ ₹ 75 ಲಕ್ಷವನ್ನು ಗ್ರಂಥಾಲಯ ನಿಧಿಗೆ ಪಾವತಿಸಿದೆ. ಆದರೆ, ಇದುವರೆಗೆ ಪಾಲಿಕೆಯು ₹ 17.59 ಕೋಟಿ ಹಣವನ್ನು ಸಂಗ್ರಹಿಸಿದೆ. ಹಾಗಾಗಿ, 16.84 ಲಕ್ಷವನ್ನು ಬಾಕಿ ಉಳಿಸಿಕೊಂಡಿದೆ. ಅಕ್ಟೋಬರ್‌ ಅಂತ್ಯದ ವೇಳೆಗೆ ₹ 14.54 ಪ್ರಾರಂಭಿಕ ಶುಲ್ಕ ಹಾಗೂ ಸಂಗ್ರಹಿಸಲಾದ ಗ್ರಂಥಾಲಯ ಕರ ₹ 3.05 ಕೋಟಿ ಇದೆ. ಹೀಗಾದರೆ, ‌ಗ್ರಂಥಾಲಯಗಳ ನಿರ್ವಹಣೆ ಹೇಗೆ? ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಬೇಸರದಿಂದ ಹೇಳಿದರು.

ADVERTISEMENT

ಗ್ರಂಥಾಲಯ ನಿರ್ವಹಣೆ ಈಗ ಸವಾಲಿನ ಕೆಲಸವಾಗಿದೆ. ಸರ್ಕಾರವು ಕಾಯಂ ಸಿಬ್ಬಂದಿಯ ವೇತನಕ್ಕೆ ಮಾತ್ರ ಹಣ ನೀಡುತ್ತಿದೆ. ಮಿಕ್ಕಂತೆ, ತಾತ್ಕಾಲಿಕ ಸಿಬ್ಬಂದಿಗೆ ವೇತನ, ವಿವಿಧ ಶುಲ್ಕ ಪಾವತಿ, ತಾಂತ್ರಿಕ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳು ನೀಡುವ ಸೆಸ್‌ ಹಣದಿಂದಲೇ ನಡೆಸಬೇಕು. ಆದರೆ, ಪಾಲಿಕೆಯು ಹಣ ಉಳಿಸಿಕೊಂಡಿರುವುರಿಂದ ಸಮಸ್ಯೆ ಎದುರಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿತಿಸಿದ ನಗರಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್, ‘ನಗರಪಾಲಿಕೆಯು ಗ್ರಂಥಾಲಯಗಳನ್ನು ನಿರ್ಲಕ್ಷಿಸಿಲ್ಲ. ಮೂರು ತಿಂಗಳಿಗೆ ಒಂದು ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸೆಸ್ ಹಣ ಬಳಕೆಯಾಗಿದೆ. ತಿಂಗಳಿಗಿಷ್ಟು ಎಂಬಂತೆ ಸೆಸ್‌ ಬಾಕಿ ಹಣವನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.

ಗ್ರಂಥಾಲಯ ಇಲಾಖೆಯಲ್ಲಿ 35 ಹುದ್ದೆಗಳನ್ನು ತುಂಬಲು ಅವಕಾಶ ಇದೆ. ಈ ಪೈಕಿ 25 ಮಂದಿ ಕೆಲಸ ಮಾಡುತ್ತಿದ್ದು, ಬಾಕಿ 10 ಹುದ್ದೆ ಖಾಲಿ ಇವೆ. ನಗರದಲ್ಲಿ ಒಟ್ಟು 17 ಶಾಖಾ ಗ್ರಂಥಾಲಯ, 13 ಸೇವಾ ಕೇಂದ್ರ ಗ್ರಂಥಾಲಯ, ಒಂದು ಇ–ಗ್ರಂಥಾಲಯ, ಒಂದು ಸಂಚಾರಿ ಗ್ರಂಥಾಲಯ, 7 ವಾಚನಾಲಯ, ಒಂದು ಸಮುದಾಯ ಮಕ್ಕಳ ಕೇಂದ್ರ, 2 ಅನುದಾನಿತ ಕೇಂದ್ರ ಇವೆ. ಹೆಚ್ಚುತ್ತಿರುವ ಗ್ರಂಥಾಲಯಗಳಿಗೆ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ. ಆದರೆ, ಸಿಬ್ಬಂದಿ ಕೊರತೆ ಇದೆ ಎಂದು ಮಂಜುನಾಥ್‌ ಹೇಳಿದರು.

ಪ್ರಾಧಿಕಾರದ ಅಧ್ಯಕ್ಷೆ ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರತಿಕ್ರಿಯಿಸಿ, ಈ ಸಂಬಂಧ ಸರ್ಕಾರದ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಗರ ಗ್ರಂಥಾಲಯ ಪ್ರಾಧಿಕಾರ ಸದಸ್ಯರಾದ ಟಿ.ಎಂ.ಶಾಂತಕುಮಾರಿ, ರಮೇಶ್, ಗ್ರಂಥಾಲಯ ಇಲಾಖೆ ಸಿಬ್ಬಂದಿ. ‘ಮುಡಾ’ ಅಧಿಕಾರಿಗಳು ಗೈರು ಹಾಜರಾಗಿದ್ದರು.

ಪೀಪಲ್ಸ್ ಪಾರ್ಕ್‌ ಗ್ರಂಥಾಲಯ: ಅನುದಾನಕ್ಕೆ ಕೋರಿಕೆ

ನಗರದ ಪೀಪಲ್ಸ್ ಪಾರ್ಕಿನಲ್ಲಿ ನಿರ್ಮಿಸುತ್ತಿರುವ ಬೃಹತ್ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ₹ 75 ಬಾಕಿ ಹಣ ಪಾವತಿಯಾಗಬೇಕಿದೆ ಎಂದು ಮಂಜುನಾಥ್ ಮನವಿ ಮಾಡಿದರು.

ಒಟ್ಟು ₹ 5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ರಾಜ್ಯ ಸರ್ಕಾರವು ₹ 4 ಕೋಟಿ, ರಾಜ್ಯ ಗ್ರಂಥಾಲಯ ಪ್ರಾಧಿಕಾರವು ₹ 1 ಕೋಟಿ ನೀಡಿದೆ. ಆದರೆ, ಪಾಲಿಕೆಯಿಂದ ಪಾವತಿಯಾಗಬೇಕಿರುವ ಹಣ ಸಿಕ್ಕಿಲ್ಲ. ಕಾಮಗಾರಿ ಮುಂದುವರೆಯಲು ಈ ಹಣ ಅಗತ್ಯ ಎಂದು ಕೋರಿದರು.

ಮೇಯರ್‌ ಪುಷ್ಪಲತಾ ಜಗನ್ನಾಥ್ ಪ್ರತಿಕ್ರಿಯಿಸಿ, ₹75 ಲಕ್ಷದ ‍ಪೈಕಿ ₹ 35 ಲಕ್ಷವನ್ನು ಈಗ ನೀಡಲಾಗುವುದು. ಬಾಕಿ ಹಣವನ್ನು ಕಂತುಗಳಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.