ಮೈಸೂರು: ‘ಸಾಹಿತಿಗಳು ಕಣ್ಣಿಗೆ ಕಾಣುವ ಜಗತ್ತಿಗಿಂತ ಅದಕ್ಕಿಂತ ಪ್ರಬಲವಾಗಿರುವ ಕಾಣದ ಜಗತ್ತನ್ನು ತೋರಿಸಬೇಕಿದೆ’ ಎಂದು ವಿಮರ್ಶಕ ಪ್ರೊ.ಎಚ್.ಎಸ್. ಶಿವಪ್ರಕಾಶ್ ಸಲಹೆ ನೀಡಿದರು.
ಪ್ರೊ.ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನ, ಸಂವಹನದ ಪ್ರಕಾಶನದ ಸಹಯೋಗದಲ್ಲಿ ಇಲ್ಲಿನ ಜೆಎಸ್‌ಎಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ‘ಮಲೆಯೂರು ಮಂದಾರ’ ಕೃತಿ ಲೋಕಾರ್ಪಣೆ ಹಾಗೂ ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಜಗತ್ತು ಬದಲಾಗುತ್ತಿದ್ದು, ಮೌಲ್ಯ ವಿನಾಶವಾಗುತ್ತಿವೆ. ಬಂಡವಾಳ ಮನುಷ್ಯನ ಮೌಲ್ಯ ಕಡಿಮೆ ಮಾಡುತ್ತಿದೆ. ಕಾಣುವ ಜಗತ್ತಿಗಿಂತ ಕಾಣದ ಜಗತ್ತನ್ನು ಮರೆಯುತ್ತಿದ್ದೇವೆ. ಕಾಣದ ಜಗತ್ತನ್ನು ಪರಿಚಯಿಸುವುದು ಸಾಹಿತಿಗಳ ಕೆಲಸವಾಗಬೇಕು’ ಎಂದರು.
‘ಇಂದಿನ ಸಾಂಸ್ಕೃತಿಕ ಜಗತ್ತಿನಲ್ಲಿ ರಾಜಕಾರಣಿಗಳು, ಸಾಹಿತಿಗಳು ಹಾಗೂ ಸ್ವಾಮೀಜಿಗಳಿಗೆ ಮೌಲ್ಯಗಳು ಅರ್ಥವಾಗುತ್ತಿಲ್ಲ. ಬಹಳ ಮುಖ್ಯವಾದ ಜಗತ್ತು ಕಳೆದುಹೋಗುತ್ತಿದ್ದು, ಅದನ್ನು ಉಳಿಸಿಕೊಳ್ಳಬೇಕಿದೆ. ಈ ಜಗತ್ತಿನಲ್ಲಿ ಮಾನವ ಚೈತನ್ಯ ಜೀವಂತವಾಗಿ, ಜಾಗೃತವಾಗಿಡುವ ನಿಟ್ಟಿನಲ್ಲಿ ಸಾಹಿತಿಗಳು ಪ್ರಯತ್ನಿಸಬೇಕು’ ಎಂದು ತಿಳಿಸಿದರು.
‘ಸಾಹಿತ್ಯ ಜನರ ಒಣಗಣ್ಣು ತೆರೆಸುವಂತಿರಬೇಕು. ಸಾಹಿತ್ಯವೆಂದರೆ ಪತ್ರಿಕೆ ಓದಿದಂತಲ್ಲ. ಒಣಗಣ್ಣಿನಿಂದ ನೋಡುವವರಿಗೆ ಸೂಕ್ಷ್ಮ ವಿಚಾರಗಳು ಗೋಚರವಾಗುತ್ತವೆ. ಹೀಗೆ ಗೋಚರವಾಗುವ ಅನೇಕ ಸೂಕ್ಷ್ಮ ವಿಷಯಗಳು ನಮ್ಮ ಬದುಕನ್ನು ಸುಂದರಗೊಳಿಸುತ್ತವೆ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಅಶಾಶ್ವತವಾದ ಜಗತ್ತಿನಲ್ಲಿ ಶಾಶ್ವತವಾದುದನ್ನು ಹುಡುಕಬೇಕು. ಅದು ಸಾಹಿತ್ಯದ ಕೆಲಸ. ಅದನ್ನು ನಾನು ಮಾಡಿದ್ದೇನೆ. ಹಣ, ಸ್ವಂತ ಮನೆ, ನಿವೇಶನ, ಸಂಪತ್ತು ಏನು ಇಲ್ಲದಿರುವ ಸಾಹಿತಿ ಅದು ನಾನೇ’ ಎಂದು ಹೇಳಿದರು.
‘ಇಲ್ಲಿ ಯಾವುದೂ ನನ್ನದಲ್ಲ. ಆದರೆ ಎಲ್ಲವೂ ನನ್ನದೇ. ಬೌದ್ಧನ ಭಿಕ್ಷಾಪಾತ್ರೆಯಂತೆ ಎಲ್ಲವೂ ಶೂನ್ಯವಾಗಿದ್ದರೂ ಪೂರ್ಣವಾಗಿರುತ್ತದೆ. ಶೂನ್ಯತೆಯಲ್ಲಿ ಪೂರ್ಣತೆ ತರುವ ಕೆಲಸ ಸಾಹಿತ್ಯ ಹಾಗೂ ಶಿಕ್ಷಣ ಮಾಡಬೇಕಿದೆ’ ಎಂದರು.
‘ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರಗಳು ಉದ್ದಿಮೆಗಳಾಗುತ್ತಿವೆ. ಆಸ್ಪತ್ರೆಗಳು ಸ್ಟಾರ್ ಹೋಟೆಲ್‌ಗಳ ತರಹ ಆಗಿವೆ. ಉದ್ಯಮೀಕರಣ ಎಲ್ಲವನ್ನೂ ನಾಶ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಆಧ್ಯಾತ್ಮಿಕ, ಕಲಾತ್ಮಕ ಮೌಲ್ಯವನ್ನು ಉಳಿಸಬೇಕಾಗಿದೆ’ ಎಂದು ಸಲಹೆ ನೀಡಿದರು.
ಕೃತಿ ಬಿಡುಗಡೆಗೊಳಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ್ ಮಾತನಾಡಿ, ‘ಇಂದಿನ ಭಾಷಣಗಳು ಸೈಕಲ್ ಸ್ಟಾಂಡ್ ಹಾಕಿ ತುಳಿದಂತೆ. ಅವು ವ್ಯರ್ಥವಾಗುತ್ತಿವೆ. ಯುವಕರು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮ ಗುರುತು ಉಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ‘ಮ.ಗು. ಬದುಕು ಮತ್ತು ಸಾಹಿತ್ಯ –ಒಂದು ಚಿಂತನೆ’ ಕುರಿತು ಮಾತನಾಡಿದರು. ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ, ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ, ಕಾರ್ಯಕ್ರಮದ ಸಂಚಾಲಕ ಕಾನ್ಯ ಶಿವಮೂರ್ತಿ, ಜಯಂತಿ ಮಲೆಯೂರು ಗುರುಸ್ವಾಮಿ ಇದ್ದರು.
‘ಶಿವಪ್ರಕಾಶ್ ಜ್ಞಾನಪೀಠ ಪ್ರಶಸ್ತಿಗೆ ಅರ್ಹರು’
ಎಚ್.ಎಸ್.ಶಿವಪ್ರಕಾಶ್ ಅವರು ಜ್ಞಾನಪೀಠ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದು ಅವರಿಗೆ ಪ್ರಶಸ್ತಿ ಸಿಗಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಸೋಮಶೇಖರ್ ಹೇಳಿದರು. ‘ಇಂದಿನ ದಿನಗಳಲ್ಲಿ ಅನೇಕ ಜನ ಯೋಗ್ಯತೆ ಇಲ್ಲದಿದ್ದರೂ ಯೋಗದಿಂದ ಎಲ್ಲವನ್ನೂ ಪಡೆದುಕೊಂಡಿದ್ದಾರೆ. ನಮಗಿಂತ ದೊಡ್ಡವರಿಲ್ಲ ಎಂಬ ಭಾವನೆ ಅಧಿಕಾರವುಳ್ಳವರಿಗೆ ಇರುತ್ತದೆ. ಅನೇಕ ದಡ್ಡರು ಉನ್ನತ ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ ಬುದ್ಧಿವಂತರು ಪ್ರಾಮಾಣಿಕರು ಸೂಕ್ತ ಅವಕಾಶ ಸಿಗದೆ ಕೆಳಗಿನ ಸ್ಥಾನದಲ್ಲಿದ್ದಾರೆ. ಇದು ವ್ಯವಸ್ಥೆಯ ದುರಂತ’ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.