ADVERTISEMENT

ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ‘ಸ್ಥಳೀಯ ಖರೀದಿ’ ಅಕ್ರಮ!

ದೂರು ಸಲ್ಲಿಕೆ ಬೆನ್ನಲ್ಲೇ ಮುಖ್ಯ ಆಡಳಿತಾಧಿಕಾರಿ ವರ್ಗಾವಣೆ ಮಾಡಿದ ಸರ್ಕಾರ

ಎಂ.ಮಹೇಶ
Published 17 ಸೆಪ್ಟೆಂಬರ್ 2024, 7:37 IST
Last Updated 17 ಸೆಪ್ಟೆಂಬರ್ 2024, 7:37 IST
ಮೈಸೂರು ವೈದ್ಯಕೀಯ ಕಾಲೇಜಿನ ನೋಟ
ಮೈಸೂರು ವೈದ್ಯಕೀಯ ಕಾಲೇಜಿನ ನೋಟ   

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಿಯಮ ಮೀರಿ ಭಾರಿ ಮೊತ್ತದ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಲಾಗಿದೆ.

ಈ ಬಗ್ಗೆ ಮಂಡ್ಯದ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಅವರು ದಾಖಲೆ ಸಹಿತ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಕಲ್ಪಶ್ರೀ ಸಿ.ಆರ್. ಅವರನ್ನು  ಸರ್ಕಾರ ವರ್ಗಾವಣೆ ಮಾಡಿರುವುದು ಆರೋಪಕ್ಕೆ ಪುಷ್ಟಿ ನೀಡುವಂತಿದೆ.

‘ಸಂಸ್ಥೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ನಾಗಣ್ಣಗೌಡರು ಲೋಕಾಯುಕ್ತ ಜೊತೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮತ್ತು ಇಲಾಖೆಯ ‍‍ಪ್ರಧಾನ ಕಾರ್ಯದರ್ಶಿಗೂ ದೂರು ಸಲ್ಲಿಸಿದ್ದರು. ಶುಕ್ರವಾರ ನಡೆದ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರ ಸಭೆಯ ನಂತರ ಅಧಿಕಾರಿಯ ವರ್ಗಾವಣೆ ಆದೇಶ ಹೊರಬಿದ್ದಿದೆ; ಪ್ರಕರಣವನ್ನು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಕಲ್ಪಶ್ರೀ ಅವರಿಗೆ ಹುದ್ದೆ ತೋರಿಸಿಲ್ಲ. ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಚಾಮರಾಜನಗರದ ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎ.ಎ. ಅವರನ್ನು ಸರ್ಕಾರ ನಿಯೋಜಿಸಿದೆ.

‘₹ 2.60 ಕೋಟಿಯಷ್ಟು ಅಕ್ರಮ ನಡೆದಿದೆ. ಈ ಬಗ್ಗೆ 200 ಪುಟಗಳ ದಾಖಲೆ ನಮ್ಮ ಬಳಿ ಇದೆ. ಅದನ್ನು ಸಲ್ಲಿಸಲಾಗಿದ್ದು, ತನಿಖೆ ನಡೆಸಿದರೆ ಎಲ್ಲರೂ ಹೊರಬರುತ್ತದೆ’ ಎನ್ನುತ್ತಾರೆ ನಾಗಣ್ಣಗೌಡ.

ಅಡ್ಡ ದಾರಿಯಲ್ಲಿ: ‘ಎರಡು ವರ್ಷಗಳಿಂದ ನಿಯಮ ಮೀರಿ ಸ್ಥಳೀಯ ಖರೀದಿ ಮಾಡಲಾಗಿದೆ. ಆಸ್ಪತ್ರೆಗೆ ಅವಶ್ಯವಿರುವ ಔಷಧ ಸೇರಿದಂತೆ ಸರ್ಜಿಕಲ್ ಉಪಕರಣಗಳ ಪೂರೈಕೆಗಾಗಿ ವಾರ್ಷಿಕ ಟೆಂಡರ್ ‍ಪ್ರಕ್ರಿಯೆ ನಡೆಸಬೇಕು. ಔಷಧಗಳ ಸಂಗ್ರಹ ಮುಗಿದರೆ ‘ವಾರ್ಷಿಕ ಬಳಕೆ ಅವಶ್ಯಕತೆ’ಯ ಅಂದಾಜು ಮಾಡಿ ಟೆಂಡರ್ ಮೂಲಕವೇ ಪಡೆಯಬೇಕು. ಆದರೆ, ಸಂಸ್ಥೆಯ ವ್ಯಾಪ್ತಿಯ ಆಸ್ಪತ್ರೆಗಳಿಗೆ ಪ್ರತಿ ತಿಂಗಳು ಔಷಧ ಹಾಗೂ ಸರ್ಜಿಕಲ್ ಉಪಕರಣಗಳನ್ನು ಖರೀದಿಸಲು, ಕೊಟೇಷನ್ ಎಂಬ ‘ಅಡ್ಡದಾರಿ’ ಹಿಡಿಯಲಾಗಿದೆ’ ಎಂದು ಆರೋಪಿಸಲಾಗಿದೆ.

‘ತಮಗೆ ಬೇಕಾದವರಿಗೆ ಕಾರ್ಯಾದೇಶ ನೀಡಲೆಂದೇ ಕೊಟೇಷನ್‌ ಮೂಲಕ ಖರೀದಿಸಲಾಗಿದೆ. ಕೊಟೇಷನ್‌ಗಳ ಬಗ್ಗೆ ವ್ಯಾಪಕ ಪ್ರಚಾರವನ್ನೂ ಮಾಡಿಲ್ಲ. ಹಲವು ಮೆಡಿಕಲ್‌ ಸ್ಟೋರ್‌ಗಳು ಎಂಆರ್‌ಪಿ ದರದ ಶೇ 20ರಷ್ಟು ರಿಯಾಯಿತಿ ದರಕ್ಕೆ ಔಷಧ ಹಾಗೂ ಸರ್ಜಿಕಲ್ ಉಪಕರಣಗಳನ್ನು ಒದಗಿಸುತ್ತಿವೆ. ಆದರೂ ಸಂಸ್ಥೆಯ ಅಧಿಕಾರಿಗಳು ಮಾರುಕಟ್ಟೆ ದರಕ್ಕೆ ಔಷಧಗಳನ್ನು ಖರೀದಿಸಿದ್ದಾರೆ. ಹೀಗಾಗಿ, ಇದು ಬಹು ದೊಡ್ಡ‌ ಹಗರಣ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಲಾಖೆಗೂ ನಷ್ಟ: ‘ಒಂದೇ ತಿಂಗಳಲ್ಲಿ ವಸ್ತುಗಳನ್ನು ಟೆಂಡರ್ ಬದಲಿಗೆ ಎರಡೆರಡು ಕೊಟೇಷನ್‌ ಮೂಲಕ ಖರೀದಿಸಿ ಇಲಾಖೆಗೂ ನಷ್ಟ ಉಂಟು ಮಾಡಲಾಗಿದೆ. ಔಷಧಗಳು ಪೂರೈಕೆಯಾಗದಿದ್ದರೂ ಪೂರೈಕೆಯಾದಂತೆ ದಾಖಲೆಗಳನ್ನು ನಿರ್ವಹಿಸಲಾಗಿದೆ. ಅವುಗಳನ್ನು ರೋಗಿಗಳಿಗೆ ನೀಡಿದ್ದಕ್ಕೆ ದಾಖಲೆಗಳನ್ನೂ ನಿರ್ವಹಿಸಿಲ್ಲ’ ಎಂದು ದೂರಿನಲ್ಲಿ ಆರೋಪಿಸಲಾಗಿದೆೆ.

‘ನಿಯಮಗಳ ಉಲ್ಲಂಘನೆ, ಸ್ವಜನ ಪಕ್ಷಪಾತ ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಕುರಿತು ಸಲ್ಲಿಸಿದ್ದ ದೂರಿಗೆ ವೈದ್ಯಕೀಯ ಶಿಕ್ಷಣ ಸಚಿವರು ಸ್ಪಂದಿಸಿದ್ದು, ಮುಖ್ಯ ಆಡಳಿತಾಧಿಕಾರಿಯನ್ನು ವರ್ಗಾಯಿಸಿದ್ದಾರೆ. ಈಗ, ಇಲಾಖಾ ತನಿಖೆಯನ್ನೂ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬುದು ನಮ್ಮ ಒತ್ತಾಯ’ ಎಂದು ನಾಗಣ್ಣ ಗೌಡ ತಿಳಿಸಿದರು.

––––

ಟೆಂಡರ್‌ನಲ್ಲಿ ಇಲ್ಲದಿರುವ ಕೆಲವು ಔಷಧಗಳನ್ನು ಮಾತ್ರ ಕೊಟೇಷನ್‌ ಮೂಲಕ ನೇರವಾಗಿ ಖರೀದಿಸಲಾಗಿದೆ. ಅದನ್ನು ಬಿಟ್ಟರೆ ಎಲ್ಲವನ್ನೂ ನಿಯಮಾನುಸಾರ ಖರೀದಿಸಿದ್ದೇವೆ. ಎಲ್ಲವೂ ಪಾರದರ್ಶಕವಾಗಿ ನಡೆದಿದೆ.

– ಡಾ.ಕೆ.ಆರ್.ದಾಕ್ಷಾಯಿಣಿ ನಿರ್ದೇಶಕಿ ಎಂಎಂಸಿಆರ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.