ADVERTISEMENT

ಮೈಸೂರು | ಇಂಧನ, ಟೋಲ್ ದರ ಏರಿಕೆಗೆ ಆಕ್ರೋಶ

ಲಾರಿ ಚಾಲಕ, ಮಾಲೀಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 15:45 IST
Last Updated 15 ಏಪ್ರಿಲ್ 2025, 15:45 IST
ಬಂಡಿಪಾಳ್ಯದ ಗೂಡ್ಸ್‌ ಟರ್ಮಿನಲ್‌ನಲ್ಲಿ ನಿಂತಿರುವ ಲಾರಿಗಳು
ಬಂಡಿಪಾಳ್ಯದ ಗೂಡ್ಸ್‌ ಟರ್ಮಿನಲ್‌ನಲ್ಲಿ ನಿಂತಿರುವ ಲಾರಿಗಳು   

ಮೈಸೂರು: ಇಂಧನ ಹಾಗೂ ಟೋಲ್ ದರ ಏರಿಕೆ ಖಂಡಿಸಿ ಲಾರಿ ಚಾಲಕರು ಹಾಗೂ ಮಾಲೀಕರ ಒಕ್ಕೂಟವು ರಾಜ್ಯದಾದ್ಯಂತ ಕರೆ ನೀಡಿರುವ ಮುಷ್ಕರಕ್ಕೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಮಧ್ಯರಾತ್ರಿಯಿಂದಲೇ ಸರಕುಗಳನ್ನು ಲಾರಿಗೆ ತುಂಬಿಸದೆ ಚಾಲಕರು ಮುಷ್ಕರದಲ್ಲಿ ಭಾಗಿಯಾದರು. ಬನ್ನಿಮಂಟಪ, ಮೇಟಗಳ್ಳಿ ಹಾಗೂ ಬಂಡಿಪಾಳ್ಯದ ಗೂಡ್ಸ್‌ ಟರ್ಮಿನಲ್‌ಗಳಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಒಕ್ಕೂಟದ ಸದಸ್ಯರು ಪ್ರತಿಭಟನಾ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಸುಮಾರು 3 ಸಾವಿರ ಲಾರಿಗಳು ರಸ್ತೆಗಿಳಿಯಲಿಲ್ಲ. ವಿವಿಧೆಡೆಗಳಿಂದ ರೈಲಿನಲ್ಲಿ ಬಂದ ಸರಕುಗಳನ್ನು ಕೆಳಗಿಳಿಸಲು ಸರಕು ಸಾಗಾಟದಾರರು ನಿರಾಕರಿಸಿದ್ದರಿಂದ 400ಕ್ಕೂ ಹೆಚ್ಚು ಲಾರಿಗಳು ಮೇಟಗಳ್ಳಿಯ ನೂತನ ಗೂಡ್ಸ್ ಟರ್ಮಿನಲ್‌ನಲ್ಲಿ ನಿಂತಲ್ಲೇ ಇದ್ದವು. ಇದರಿಂದ ಹಣ್ಣು, ತರಕಾರಿ, ಎಲ್‌ಪಿಜಿ ಸಿಲಿಂಡರ್, ಕಟ್ಟಡ ಸಾಮಗ್ರಿ, ಅಗತ್ಯ ವಸ್ತುಗಳು ಸೇರಿದಂತೆ ಸರಕು, ಸಾಗಣೆಯಲ್ಲಿ ವ್ಯತ್ಯಯವಾಯಿತು.

ADVERTISEMENT

ಮುಷ್ಕರದ ಹಿನ್ನೆಲೆಯಲ್ಲಿ ಮೈಸೂರು ಲಾರಿ ಮಾಲೀಕರು ಮತ್ತು ಚಾಲಕರ ಒಕ್ಕೂಟದಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಒಕ್ಕೂಟದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮುಷ್ಕರದಲ್ಲಿ ಭಾಗವಹಿಸಿದ ಲಾರಿ ಮಾಲೀಕರು, ಚಾಲಕರು ಸರ್ಕಾರ ನಡೆ ಖಂಡಿಸಿ ಘೋಷಣೆಗಳನ್ನು ಕೂಗಿದರು.

‘6 ತಿಂಗಳಲ್ಲಿ ರಾಜ್ಯ ಸರ್ಕಾರ 2 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಹಾಗೂ ಟೋಲ್‌ ದರ ಇಳಿಕೆ ಮಾಡಲು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರವರೆಗೆ ಗಡುವು ಕೊಟ್ಟಿದ್ದರು. ಆದರೆ ಅವರು ಸ್ಪಂದಿಸದ ಪರಿಣಾಮ, ಮಂಗಳವಾರದಿಂದ ನಮ್ಮ ಬೇಡಿಕೆ ಈಡೇರಿಸುವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ’ ಎಂದರು.

ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮ್, ಅಬ್ದುಲ್ ಖಾದಿರ್ ಶಹೀದ್ ಭಾಗವಹಿಸಿದ್ದರು.

ಮೈಸೂರಿನ ಬಂಡಿಪಾಳ್ಯ ಸಿಗ್ನಲ್ ಲೈಟ್ ಬಳಿ ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಸದ್ಯಸರು ಡೀಸೆಲ್ ದರವನ್ನು ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.