ADVERTISEMENT

ಮೊಬೈಲ್‌, ಮದ್ಯದಿಂದ ದೂರವಿರಿ: ಡಾ. ಸುಶ್ರುತ್‌ ಗೌಡ

‘ಮಾನಸಯಾನ–2023’ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 5:36 IST
Last Updated 14 ಸೆಪ್ಟೆಂಬರ್ 2023, 5:36 IST
ಮಾನಸಯಾನ ಕಾರ್ಯಕ್ರಮವನ್ನು ಚಿತ್ರನಟಿ ನಿಧಿ ಸುಬ್ಬಯ್ಯ ಉದ್ಘಾಟಿಸಿದರು. ಡಾ. ಸುಶ್ರುತ್‌, ಗಣೇಶ್‌ ಪ್ರಸಾದ್‌, ಹರೀಶ್‌, ಕುಮಾರ್ ಇದ್ದರು
ಮಾನಸಯಾನ ಕಾರ್ಯಕ್ರಮವನ್ನು ಚಿತ್ರನಟಿ ನಿಧಿ ಸುಬ್ಬಯ್ಯ ಉದ್ಘಾಟಿಸಿದರು. ಡಾ. ಸುಶ್ರುತ್‌, ಗಣೇಶ್‌ ಪ್ರಸಾದ್‌, ಹರೀಶ್‌, ಕುಮಾರ್ ಇದ್ದರು   

ಮೈಸೂರು: ವಿದ್ಯಾರ್ಥಿ ಯುವಜನರು ಮೊಬೈಲ್‌, ಮದ್ಯದ ಗೀಳಿನಿಂದ ದೂರವಿದ್ದು ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶ್ರುತ್‌ ಗೌಡ ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಮಾನಸಗಂಗೋತ್ರಿಯ ಕ್ಲಾಕ್‌ ಟವರ್‌ ಬಳಿ ಬುಧವಾರ ಸಂಜೆ ಆಯೋಜಿಸಿದ್ದ ‘ಮಾನಸಯಾನ–2023’ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರು ವಿ.ವಿ. ದೇಶದಲ್ಲೇ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು. ಇಲ್ಲಿ ಓದಿದ ಅನೇಕರು ರಾಷ್ಟ್ರ– ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕುವೆಂಪು, ದೇವನೂರ ಮಹದೇವರಂತಹವರು ಇಲ್ಲಿ ಓದಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಚಿತ್ರನಟಿ ನಿಧಿ ಸುಬ್ಬಯ್ಯ ‘ನಾನು ಮೈಸೂರಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ಹೀಗೆಯೇ ಗುಂಪಿನಲ್ಲಿ ನಿಂತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಈ ದಿನ ನನ್ನ ವಿದ್ಯಾರ್ಥಿ ಜೀವನ ನೆನಪಿಸಿದೆ’ ಎಂದು ಸ್ಮರಿಸಿದರು.

ADVERTISEMENT

ಗುಂಡ್ಲುಪೇಟೆ ಶಾಸಕ ಗಣೇಶ್‌ಪ್ರಸಾದ್‌, ಮಾರ್ಬಳ್ಳಿ ಕುಮಾರ್, ಹರೀಶ್‌, ಬಿ.ಎಸ್. ಚಂದ್ರಶೇಖರ್, ಕಾರ್ಯಕ್ರಮ ಸಂಯೋಜಕರಾದ ಅಭಿಷೇಕ್‌ ಪಾಳ್ಯಗಾರ್, ಕವಿರಾಜ್‌ ಇದ್ದರು.

ಮಾನಸಯಾನ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು ಪ್ರಜಾವಾಣಿ ಚಿತ್ರ

Cut-off box - ಹಾಡು–ನೃತ್ಯದ ರಸದೌತಣ ವೇದಿಕೆ ಕಾರ್ಯಕ್ರಮದ ತರುವಾಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು. ವಿದ್ಯಾರ್ಥಿನಿಯರು ವಿವಿಧ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ನಡುವೆ ಸಂಗೀತದ ರಸದೌತಣವೂ ಇತ್ತು. ಶಿಳ್ಳೆ–ಚಪ್ಪಾಳೆಗಳ ಮೂಲಕ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.