ADVERTISEMENT

ಮಂಡಿ ಮೊಹಲ್ಲಾದಲ್ಲಿ ಗಲಾಟೆ; ಶಾಂತಿ ಸಭೆ

ಎರಡು ಗುಂಪಿನ ಮಾರಾಮಾರಿಗೆ ಕಾರಣವಾದ ಕ್ಷುಲ್ಲಕ ವಿಷಯ

​ಪ್ರಜಾವಾಣಿ ವಾರ್ತೆ
Published 20 ಮೇ 2019, 15:31 IST
Last Updated 20 ಮೇ 2019, 15:31 IST
ಮಂಡಿ ಠಾಣೆಯಲ್ಲಿ ಸೋಮವಾರ ಡಿಸಿಪಿ ಮುತ್ತುರಾಜ್ ಶಾಂತಿ ಸಭೆ ನಡೆಸಿದರು
ಮಂಡಿ ಠಾಣೆಯಲ್ಲಿ ಸೋಮವಾರ ಡಿಸಿಪಿ ಮುತ್ತುರಾಜ್ ಶಾಂತಿ ಸಭೆ ನಡೆಸಿದರು   

ಮೈಸೂರು: ಇಲ್ಲಿನ ಮಂಡಿಮೊಹಲ್ಲಾದ ಚಿಕ್ಕಮಾರುಕಟ್ಟೆ ಬಳಿ ಎರಡು ಅಂಗಡಿಗಳ ಮಾಲೀಕರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿತು. 50ಕ್ಕೂ ಅಧಿಕ ಮಂದಿ ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ರಸ್ತೆಯಲ್ಲಿ ಭೀತಿ ಸೃಷ್ಟಿಸಿದರು.

ಎರಡು ಗುಂಪುಗಳು ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದವು. ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿ, 6 ಮಂದಿಯನ್ನು ಬಂಧಿಸಿದರು. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.

ಏನಿದು ಘಟನೆ?

ADVERTISEMENT

ಹೋಟೆಲ್ ಹನುಮಂತು ಮತ್ತು ನ್ಯೂ ಉರೂಜ್ ಜೆಂಟ್ಸ್ ಕಲೆಕ್ಷನ್ ಅಂಗಡಿ ಮಾಲೀಕರ ನಡುವೆ ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ವಾಹನ ನಿಲುಗಡೆ ಕುರಿತು ಜಗಳ ಆರಂಭವಾಯಿತು. ನೋಡನೋಡುತ್ತಿದ್ದಂತೆ ಎರಡೂ ಕಡೆಯ ಹಲವು ಮಂದಿ ಸೇರಿ ಪರಸ್ಪರ ಹೊಡೆದಾಟ, ಕಲ್ಲುತೂರಾಟದಲ್ಲಿ ತೊಡಗಿದರು. ಇದರಿಂದ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಮಂಡಿ ಠಾಣೆ ಇನ್‌ಸ್ಪೆಕ್ಟರ್ ಅರುಣ್ ಗುಂಪನ್ನು ಚದುರಿಸಿದರು. ವಿಜಯಕುಮಾರ್, ಯಶವಂತ್, ಪ್ರಶಾಂತ್, ಮಹಮದ್ ಸರ್ವರ್, ಪರ್ಹಾನ್ ಷರೀಫ್ ಹಾಗೂ ರಿಯಾಜ್ ಷರೀಫ್ ಎಂಬುವವರನ್ನು ಬಂಧಿಸಿದರು.

ಶಾಂತಿ ಸಭೆ:‌

ಇದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನೆಲೆಸಿತು. ಡಿಸಿಪಿ ಮುತ್ತುರಾಜ್ ಸೋಮವಾರ ಮಂಡಿಠಾಣೆಯಲ್ಲಿ ಎರಡೂ ಗುಂಪಿನ ನಡುವೆ ಶಾಂತಿ ಸಭೆ ನಡೆಸಿದರು. ‘ಯಾವುದೇ ಕಾರಣಕ್ಕೂ ಮತ್ತೆ ಇಂತಹ ಕೃತ್ಯದಲ್ಲಿ ತೊಡಗಬಾರದು. ಶಾಂತಿ ಕದಡುವ ಪ್ರಯತ್ನ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಉಭಯ ಬಣದ ನಾಯಕರು ಶಾಂತಿಯನ್ನು ಪಾಲಿಸುವ ಆಶ್ವಾಸನೆ ನೀಡಿದರು. ದೂರು ಮತ್ತು ಪ್ರತಿ ದೂರು ದಾಖಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.