ADVERTISEMENT

ಮೇ 24ರಿಂದ 28ರವರೆಗೆ ಮಾವು, ಹಲಸು ಮೇಳ ಆಕರ್ಷಣೆ

ಪ್ರದರ್ಶನ, ಮಾರಾಟ: 5 ಜಿಲ್ಲೆಗಳಿಂದ ಕೃಷಿಕರು ಭಾಗಿ

​ಪ್ರಜಾವಾಣಿ ವಾರ್ತೆ
Published 21 ಮೇ 2019, 12:33 IST
Last Updated 21 ಮೇ 2019, 12:33 IST
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ.ಸಂಜಯ್ ಹಾಗೂ ಹಿರಿಯ ಸಹಾಯಕ ನಿರ್ದೇಶಕಿ ಹಬೀಬಾ ನಿಷಾದ್ ಮಾವಿನ ಹಣ್ಣುಗಳನ್ನು ಪ್ರದರ್ಶಿಸಿದರು
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ.ಸಂಜಯ್ ಹಾಗೂ ಹಿರಿಯ ಸಹಾಯಕ ನಿರ್ದೇಶಕಿ ಹಬೀಬಾ ನಿಷಾದ್ ಮಾವಿನ ಹಣ್ಣುಗಳನ್ನು ಪ್ರದರ್ಶಿಸಿದರು   

ಮೈಸೂರು: ತೋಟಗಾರಿಕೆ ಇಲಾಖೆ ವತಿಯಿಂದ ಮೇ 24ರಿಂದ 28ರವರೆಗೆ ಕರ್ಜನ್‌ ‍ಪಾರ್ಕ್‌ ಆವರಣದಲ್ಲಿ ಮಾವು, ಹಲಸು ಮೇಳವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎ.ಬಿ.ಸಂಜಯ್ ಮಾಹಿತಿ ನೀಡಿದರು.

ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಮಾವು ಬೆಳೆಗಾರರು ಭಾಗವಹಿಸುತ್ತಿದ್ದಾರೆ. ಮಾರಾಟ ಹಾಗೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ ಒಟ್ಟು 42 ಮಳಿಗೆಗಳು ಇರಲಿದ್ದು, 18 ಮಳಿಗೆಗಳನ್ನು ಮೈಸೂರಿನ ಕೃಷಿಕರಿಗೆ ಮೀಸಲಿಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಸಾಯನಿಕ ರಹಿತ ಹಣ್ಣುಗಳು: ‘ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಬಳಸುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮೇಳದ ಮೂಲಕ ಇದಕ್ಕೆ ಪ್ರಚಾರ ನೀಡುವುದು ಉದ್ದೇಶ. ಹಾಗಾಗಿ, ಮೇಳದಲ್ಲಿ ಇದಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿ ಪ್ರದರ್ಶನ ಹಾಗೂ ಮಾರಾಟಗೊಳ್ಳುವ ಹಣ್ಣುಗಳಲ್ಲಿ ರಸಾಯನಿಕ ಬಳಕೆ ಇರುವುದಿಲ್ಲ. ಇದನ್ನು ಖಚಿತಪಡಿಸಿಕೊಳ್ಳಲು ದಿನಕ್ಕೆ ಮೂರು ಬಾರಿ ಪರೀಕ್ಷೆ ನಡೆಸುತ್ತೇವೆ. ಗುಣಮಟ್ಟ ಖಚಿತಪಡಿಸುತ್ತೇವೆ’ ಎಂದು ಹೇಳಿದರು.

ADVERTISEMENT

ರತ್ನಗಿರಿ, ಆಲ್ಫೋನ್ಸಾ, ಬಾದಾಮಿ, ರಸಪುರಿ, ಮಲಗೋಬಾ, ತೋತಾಪುರಿ, ಮಲ್ಲಿಕ, ದಶೇರಿ ಜಾತಿಯ ಮಾವಿನ ಹಣ್ಣು ಮಾರಾಟಕ್ಕೆ ಇರಲಿವೆ. ವಿವಿಧ ಪ್ರಭೇದಗಳ ಹಲಸಿನ ಹಣ್ಣುಗಳೂ ಇರಲಿವೆ. ಮಾವು, ಹಲಸು ಸೇರಿದಂತೆ ಒಟ್ಟು 1 ಲಕ್ಷ ಹಣ್ಣುಗಳನ್ನು ಮಾರಾಟ ಮಾಡುವ ಗುರಿ ಇದೆ ಎಂದರು.

ಪರಿಸರ ಸ್ನೇಹಿ ಕ್ರಮ: ಮೇಳದಲ್ಲಿ ಪ್ಲಾಸ್ಟಿಕ್‌ ಚೀಲ ಬಳಕೆ ನಿಷೇಧಿಸಲಾಗಿದೆ. ಬದಲಿಗೆ ರಟ್ಟಿನ ಡಬ್ಬಿಗಳಲ್ಲಿ ಹಣ್ಣುಗಳನ್ನು ಹಾಕಿ ಗ್ರಾಹಕರಿಗೆ ನೀಡಲಾಗುವುದು ಎಂದು ವಿವರಿಸಿದರು.

ಮೇಳವು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಇರಲಿದೆ. ‘ಹಾಮ್‌ಕಾಮ್ಸ್‌’ಗಿಂತ ಕಡಿಮೆ ದರದಲ್ಲಿ ಮಾವು, ಹಲಸು ಸಿಗಲಿವೆ ಎಂದರು.

ಹಿರಿಯ ಸಹಾಯಕ ನಿರ್ದೇಶಕಿ ಹಬೀಬಾ ನಿಷಾದ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.