ADVERTISEMENT

ಹಸಿಮೆಣಸಿನಕಾಯಿ ಬಲು ದುಬಾರಿ

ಕೋಳಿ ಮಾಂಸ ಅಗ್ಗ, ನುಗ್ಗೆಕಾಯಿ ದರ ಸ್ಥಿರ

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:13 IST
Last Updated 20 ಮೇ 2019, 20:13 IST
ಕೋಳಿ
ಕೋಳಿ   

ಮೈಸೂರು: ಮುಂಗಾರುಪೂರ್ವ ಮಳೆ ಕಳೆದ ವಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿದ್ದಿದೆ. ಆದರೆ, ಬಿಸಿಲಿನ ತಾಪ ಕಡಿಮೆಯಾಗದೇ ಇರುವುದರಿಂದ ತರಕಾರಿ ಗಿಡಗಳಲ್ಲಿನ ಹೂಗಳು ಬಾಡಿ ಕಮರಿ ಹೋಗುತ್ತಿವೆ. ಇದರಿಂದ ಸಹಜವಾಗಿಯೇ ತರಕಾರಿಗಳ ಉತ್ಪಾದನೆ ಕಡಿಮೆಯಾಗಿ ಬೆಲೆ ದುಬಾರಿಯಾಗಿಯೇ ಮುಂದುವರಿದಿದೆ.

ಈ ವಾರ ದುಬಾರಿಯಾಗುವ ಸರದಿ ಟೊಮೆಟೊವಿನದು. ಇಲ್ಲಿನ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರ ಕೆ.ಜಿಗೆ ₹ 26 ಇತ್ತು. ಈಗ ಇದು ₹ 32 ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ₹ 50 ದಾಟಿದೆ. ಖರೀದಿದಾರರು ₹ 10ಕ್ಕೆ ಕೊಡಿ ಎಂದು ಕೇಳಿದರೆ ಎರಡೊ, ಮೂರೊ ಟೊಮೆಟೊ ಸಿಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ವಾರ ಕೆ.ಜಿಗೆ ₹ 45 ಇದ್ದ ಹಸಿಮೆಣಸಿನಕಾಯಿ ದರ ಈ ವಾರ ₹ 50 ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 70ರ ಆಸುಪಾಸಿನಲ್ಲಿದೆ. ಕಳೆದ ವಾರ ₹ 70ರಲ್ಲಿದ್ದ ಬೀನ್ಸ್ ಸಗಟು ಧಾರಣೆ ಈ ವಾರ ₹ 60 ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದು ₹ 80ಕ್ಕೂ ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ.

ADVERTISEMENT

ತಮಿಳುನಾಡಿನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಇದರಿಂದ ಕ್ಯಾರೇಟ್‌ನ ಉತ್ಪಾದನೆ ಕಡಿಮೆಯಾಗಿದೆ. ಅಲ್ಲಿಂದ ಬರುತ್ತಿರುವ ಕ್ಯಾರೇಟ್‌ನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಬೆಲೆಯು ಏರುಗತಿ ಪಡೆದಿದೆ. ತಿಂಗಳ ಆರಂಭದಲ್ಲಿ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 25 ಇದ್ದ ದರ ಇದೀಗ ₹ 38ನ್ನು ತಲುಪಿದೆ.

ಮದುವೆ ಮೊದಲಾದ ಶುಭ ಸಮಾರಂಭ ಮಾಡುವವರಿಗೆ ಹಾಗೂ ಗ್ರಾಹಕರಿಗೆ ಇದರಿಂದ ತೊಂದರೆಯಾಗಿದೆ. ಮತ್ತೊಂದು ಕಡೆ ರೈತರು ಹಾಕಿದ ಫಸಲಿನಲ್ಲಿ ಸಮರ್ಪಕವಾದ ಇಳುವರಿ ಬಾರದ ಕಾರಣ ಅವರಿಗೂ ಹೆಚ್ಚಿನ ಲಾಭವಾಗುತ್ತಿಲ್ಲ.‌

‘ಒಂದು ಎಕರೆಯಲ್ಲಿನ ಟೊಮೆಟೊ ಸಸಿಗಳ ಪೈಕಿ ಅರ್ಧದಷ್ಟು ಮಾತ್ರ ಉಳಿಯುತ್ತವೆ. ಅವುಗಳಲ್ಲಿ ಸ್ವಲ್ಪ ಸಸಿಗಳಲ್ಲಿ ಮಾತ್ರ ಕಾಯಿ ಬರುತ್ತದೆ. ಇದರಲ್ಲಿ ದರ ಏರಿಕೆಯಾದರೂ ಕೈಗೆ ಬರುವುದು ಸ್ವಲ್ಪ ಮಾತ್ರ. ಹೆಚ್ಚಿನ ಲಾಭವಾಗದು’ ಎಂದು ಜಯಪುರದ ರೈತ ಪುಟ್ಟಸ್ವಾಮಿ ಹೇಳುತ್ತಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.