ADVERTISEMENT

ಶ್ರೀಕಂಠೇಶ್ವರ ದೇವಾಲಯದಲ್ಲಿ ಸಾಮೂಹಿಕ ವಿವಾಹ

ಪ್ರೇಮ, ಅಂತರ್ಜಾತಿ, ವಿವಿಧ ಸಮುದಾಯದ ಜೋಡಿಗಳು ನವಜೀವನಕ್ಕೆ ಅಡಿ

​ಪ್ರಜಾವಾಣಿ ವಾರ್ತೆ
Published 23 ಮೇ 2025, 7:28 IST
Last Updated 23 ಮೇ 2025, 7:28 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಾಂಗಲ್ಯ ಭಾಗ್ಯ, ಸರಳ ಸಾಮೂಹಿಕ ವಿವಾಹದಲ್ಲಿ 24 ಜೋಡಿಗಳು ಸತಿ–ಪತಿಗಳಾದರು
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಾಂಗಲ್ಯ ಭಾಗ್ಯ, ಸರಳ ಸಾಮೂಹಿಕ ವಿವಾಹದಲ್ಲಿ 24 ಜೋಡಿಗಳು ಸತಿ–ಪತಿಗಳಾದರು   

ನಂಜನಗೂಡು: ನಗರದ ಶ್ರೀಕಂಠೇಶ್ವರ ದೇವಾಲಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಗುರುವಾರ ಆಯೋಜಿಸಲಾಗಿದ್ದ ಮಾಂಗಲ್ಯ ಭಾಗ್ಯ, ಸರಳ ಸಾಮೂಹಿಕ ವಿವಾಹದಲ್ಲಿ 24 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟು ಸತಿ-ಪತಿಗಳಾದರು.

ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಧರ ದೀಕ್ಷಿತ್, ಶ್ರೀಕಂಠೇಶ್ವರ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿವಾಹ ಮಾಡಿಸಿದರು.

ಪರಿಶಿಷ್ಟ ಜಾತಿಯ 10 ಜೋಡಿ, ನಾಯಕ ಸಮುದಾಯದ 4, ಸೋಲಿಗ ಸಮುದಾಯದ 2, ಉಪ್ಪಾರ ಸಮುದಾಯದ 1, ಗಾಣಿಗಶೆಟ್ಟಿ ಸಮುದಾಯದ 2, ಮಡಿವಾಳ ಶೆಟ್ಟಿ ಸಮುದಾಯದ 1, ಕುರುಬ ಸಮುದಾಯದ 1, 2 ಅಂತರ್ಜಾತಿ, 1 ಅಂಗವಿಕಲ ಜೋಡಿ ಸೇರಿದಂತೆ ಒಟ್ಟು 24 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.

ADVERTISEMENT

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಗುಡಿ ಹೊನ್ನತ್ತಿ ಗ್ರಾಮದ ಕುರುಬ ಜನಾಂಗಕ್ಕೆ ಸೇರಿದ ಕರಬಸಪ್ಪ ಮೈಸೂರಿನ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ನರಸೀಪುರ ತಾಲ್ಲೂಕಿನ ಕೋಳಿಮಲ್ಲನಹುಂಡಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮಮತಾಳನ್ನು ಪ್ರೀತಿಸಿ, ಎರಡು ಕುಟುಂಬಗಳು ಮದುವೆಗೆ ಒಪ್ಪಿಗೆ ಪಡೆದು ಸರಳ ವಿವಾಹದಲ್ಲಿ ಮದುವೆಯಾಗುವ ಮೂಲಕ ಪ್ರೀತಿ ಜಾತಿಯ ಎಲ್ಲೇ ಮೀರಿದ್ದು ಎಂಬುದನ್ನು ಸಾಬೀತುಪಡಿಸಿದರು.

ನಗರದ ಎನ್‌ಜಿಒ ಕಾಲೊನಿಯ ಮರಾಠ ಸಮುದಾಯದ ಉದಯ್‌ಕುಮಾರ್ ರಾವ್ ಮತ್ತು ಅದೇ ಬೀದಿಯ ನಾಯಕ ಸಮುದಾಯದ ನಿರ್ಮಲಾರನ್ನು ಅಂತರ್ಜಾತಿ ವಿವಾಹವಾದರು. ವಿಶೇಷ ಚೇತನ ಜೋಡಿಗಳಲ್ಲಿ ಮೈಸೂರಿನ ಕಣ್ಣಿನ ತೊಂದರೆ ಇರುವ ಮಹದೇವ ಪ್ರಸಾದ್, ಕಾಲಿನ ತೊಂದರೆ ಇರುವ ಭಾಗ್ಯಳನ್ನು ವರಿಸುವ ಮೂಲಕ ಸತಿ– ಪತಿಗಳಾದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ‘ಆಡಂಬರದ ಮದುವೆಗಾಗಿ ಸಾಲ ಮಾಡಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಮಾಂಗಲ್ಯ ಭಾಗ್ಯ ಯೋಜನೆಯನ್ನು 2020ರಲ್ಲಿ ಆರಂಭಿಸಿದೆ. ಮಧ್ಯಮ ಮತ್ತು ಬಡ ಕುಟುಂಬಗಳು ಸರ್ಕಾರದ ಯೋಜನೆಯಲ್ಲಿ ಸರಳವಾಗಿ ಮದುವೆ ಆಗುವ ಮೂಲಕ ಎಲ್ಲರಿಗೂ ಮಾದರಿ ಆಗಬೇಕು, ಈ ಬಾರಿ 24 ಜೋಡಿಗಳು ಸಾಮೂಹಿಕ ವಿವಾಹ ಆಗಿದ್ದು, ಮುಂದಿನ ವರ್ಷ ಕನಿಷ್ಠ 100 ಜೋಡಿಗಳು ಸರಳ ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಶ್ರೀಕಂಠೇಶ್ವರ ದೇವಾಲಯದ ಇಒ ಜಗದೀಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ ಹರೀಶ್, ಸಿಪಿಐ ರವೀಂದ್ರ ಉಪಸ್ಥಿತರಿದ್ದರು.

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹದಲ್ಲಿ 24 ಜೋಡಿಗಳು ಸತಿಪತಿಗಳಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.