ADVERTISEMENT

ಮೈಸೂರು: ಠಾಣೆಯ ಬಳಿಯೇ ಮಾದಕ ವಸ್ತು ಮಾರಾಟ

ಪೊಲೀಸ್‌ ಕಾರ್ಯಾಚರಣೆಗೂ ಬಗ್ಗದ ಪೆಡ್ಲರ್‌ಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:45 IST
Last Updated 8 ಆಗಸ್ಟ್ 2025, 2:45 IST
ಮೈಸೂರಿನ ಉದಯಗಿರಿ, ಎನ್.ಆರ್. ಮೊಹಲ್ಲಾದಲ್ಲಿ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು
ಮೈಸೂರಿನ ಉದಯಗಿರಿ, ಎನ್.ಆರ್. ಮೊಹಲ್ಲಾದಲ್ಲಿ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು   

ಮೈಸೂರು: ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ ನಜರ್‌ಬಾದ್‌ ಠಾಣೆಯ ಹತ್ತಿರದ ಕಿರಾಣಿ ಅಂಗಡಿಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟದ ಜಾಲ ಪತ್ತೆಯಾಗಿದೆ.

ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಕಿರಾಣಿ ಅಂಗಡಿ ಮಾಲೀಕ ಸೋಯಲ್ ಜೈನ್ ಸೆರೆ ಸಿಕ್ಕಿದ್ದು, ಬಬೀಲ್‌ ಎಂಬಾತ ಪರಾರಿಯಾಗಿದ್ದಾನೆ.

‘ಸೋಯಲ್‌ ಕೇರಳದಿಂದ ಮಾದಕ ವಸ್ತು ತರಿಸಿಕೊಂಡು, ಅಂಗಡಿಯಲ್ಲಿದ್ದ ಅಕ್ವೇರಿಯಂನಲ್ಲಿ ಮಾದಕ ವಸ್ತುವನ್ನು ಅಡಗಿಸಿಟ್ಟುಕೊಂಡಿದ್ದ. ದಾಳಿಯ ವೇಳೆ 65 ಗ್ರಾಂ ತೂಕದ ಎಂಡಿಎಂಎ ವಶ ಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸ್ಟೆಲ್‌ಗಳಲ್ಲಿ ತಪಾಸಣೆ:

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌, ಡಿಸಿಪಿಗಳಾದ ಕೆ.ಎಸ್‌. ಸುಂದರ್‌ರಾಜ್, ಆರ್.ಎನ್. ಬಿಂದು ರಾಣಿ ಹಾಗೂ ಸಿಬ್ಬಂದಿ ತಂಡ ಬುಧವಾರ ತಡರಾತ್ರಿ ನಗರದ ಹನ್ನೊಂದು ಹಾಸ್ಟೆಲ್‌ಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿತು. 

ಉದಯಗಿರಿ, ಎನ್.ಆರ್. ಮೊಹಲ್ಲಾದಲ್ಲಿ ಕಾರು, ಬೈಕ್ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕರನ್ನು ತಡೆದು ತಪಾಸಣೆ ನಡೆಸಿದರು. 860 ಗ್ರಾಂ ಗಾಂಜಾ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದರು.

‘140 ಯುವಕರನ್ನು ತಪಾಸಣೆ ನಡೆಸಿ, 12 ಪ್ರಕರಣ ದಾಖಲಿಸಲಾಗಿದೆ. ಅನುಮಾನ ಬಂದ 10 ಮಂದಿಯನ್ನು ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.