ಮೈಸೂರು: ‘ಗಂಡನಿಂದಲೇ ಆ್ಯಸಿಡ್ ದಾಳಿಗೆ ಒಳಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಯಾರೂ ಗಮನಿಸದ ಸ್ಥಿತಿಯಲ್ಲಿದ್ದಾಗ ಮಾಧ್ಯಮದ ವರದಿಯೂ ನನಗೆ ನೆರವು ದೊರಕಿಸಿತು’ ಎಂದು ಆ್ಯಸಿಡ್ ದಾಳಿ ಸಂತ್ರಸ್ತೆ ಜಯಲಕ್ಷ್ಮೀ ಸ್ಮರಿಸಿದರು.
ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ‘ಸದೃಢ, ಸುಸ್ಥಿರ ಸಮಾಜದಲ್ಲಿ ಸಮಾನತೆ ಮತ್ತು ಮಹಿಳಾ ಸಬಲೀಕರಣಗಳನ್ನು ಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ’ ಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಆ್ಯಸಿಡ್ ದಾಳಿಯ ಕ್ರೌರ್ಯವನ್ನು ನನೆದು ಕಣ್ಣೀರಾದರು.
‘ರಾಜ್ಯದಲ್ಲಿ 65 ಮಹಿಳೆಯರು ಆ್ಯಸಿಡ್ ದಾಳಿಗೆ ತುತ್ತಾಗಿದ್ದು, ಅದರಲ್ಲಿ ಬಹುತೇಕರು ತಮ್ಮ ಗಂಡಂದಿರಿಂದಲೇ ದೌರ್ಜನ್ಯಕ್ಕೆ ಒಳಗಾದವರು. ಮನೆಯಲ್ಲೇ ಕೊಳೆಯಬೇಕು ಎಂಬ ಉದ್ದೇಶದಿಂದ ಗಂಡ ಆ್ಯಸಿಡ್ ಎರಚಿದ್ದ, ಆದರೆ, ಅದಕ್ಕೆ ವಿರುದ್ಧವಾಗಿ ಜನರ ಮಧ್ಯೆ ತೆರಳಲು ನಾನು ನಿರ್ಧರಿಸಿದೆ. ‘ಗೆಳತಿ’ ಸಂಘಟನೆ ಕಟ್ಟಿಕೊಂಡು ಆ್ಯಸಿಡ್ ದಾಳಿ ಸಂತ್ರಸ್ತರ ಪರ ಕೆಲಸ ಮಾಡಿದೆವು. ಇಂದು ನಮಗೆ ಮಾಸಾಶನ, 15 ಲಕ್ಷದವರೆಗೂ ಪರಿಹಾರ, ಆಸ್ಪತ್ರೆ ವೆಚ್ಚ ದೊರೆಯುತ್ತದೆ’ ಎಂದರು.
ಲೇಖಕ ಅಮ್ಮಸಂದ್ರ ಸುರೇಶ್, ತಿರುಗಾಟ ಎಂಬ ಅಂಕಣದ ಮೂಲಕ ಅಲೆಮಾರಿ ಸಮುದಾಯದ ಸ್ಥಿತಿಗತಿ ಸುಧಾರಿಸಲು ಮಾಡಿದ ಪ್ರಯತ್ನದ ಬಗ್ಗೆ ತಿಳಿಸಿದರು. ಡಾ.ಶೋಭ ರಾಣಿ ಗೋಷ್ಠಿ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.