ADVERTISEMENT

ದೇಶ ಕಟ್ಟುವ ವೈದ್ಯಕೀಯ ಕ್ಷೇತ್ರ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 15:40 IST
Last Updated 15 ಡಿಸೆಂಬರ್ 2018, 15:40 IST
ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಶನಿವಾರ ನಡೆದ ಪದವೀಧರರ ದಿನ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳೊಂದಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರಪ್ರಸಾದ್, ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ, ಅಂತರರಾಷ್ಟ್ರೀಯ ವಾಕ್‌ದೋಷ ಮತ್ತು ಚಿಕಿತ್ಸಕರ ಸಂಘದ ಅಧ್ಯಕ್ಷ ಪ್ರೊ.ಆರ್‌.ರಂಗಸಾಯಿ ಇದ್ದಾರೆ
ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಶನಿವಾರ ನಡೆದ ಪದವೀಧರರ ದಿನ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳೊಂದಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರಪ್ರಸಾದ್, ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ, ಅಂತರರಾಷ್ಟ್ರೀಯ ವಾಕ್‌ದೋಷ ಮತ್ತು ಚಿಕಿತ್ಸಕರ ಸಂಘದ ಅಧ್ಯಕ್ಷ ಪ್ರೊ.ಆರ್‌.ರಂಗಸಾಯಿ ಇದ್ದಾರೆ   

ಮೈಸೂರು: ವೈದ್ಯಕೀಯ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ದೇಶವನ್ನು ಕಟ್ಟುವ ಸ್ತಂಭಗಳು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಭಿಪ್ರಾಯ‍ಪಟ್ಟರು.

ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪದವೀಧರರ ದಿನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ವೈದ್ಯಕೀಯ ಕ್ಷೇತ್ರವನ್ನು ಈಗ ದೇಶದ ಆಸ್ತಿ ಎಂದೇ ಪರಿಗಣಿಸಲಾಗಿದೆ. ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ದೇಶ ಕಟ್ಟುವ ಸೈನಿಕರಿದ್ದಂತೆ. ವೈದ್ಯಕೀಯ ಸೌಲಭ್ಯಗಳು ಎಲ್ಲರಿಗೂ ಸಿಗಬೇಕು. ಅದಕ್ಕೆ ಬಡವ– ಶ್ರೀಮಂತ ಎಂಬ ಭೇದ ಇರಬಾರದು. ಅಂತೆಯೇ, ಗುಣಮಟ್ಟದ ಚಿಕಿತ್ಸೆ ನೀಡುವುದು ಮುಖ್ಯವಾಗಬೇಕು. ಈ ಕುರಿತು ನವ ಪದವೀಧರರು ಗಂಭೀರವಾಗಿ ಚಿಂತಿಸಬೇಕು. ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರಪ್ರಸಾದ್ ಮಾತನಾಡಿ, ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಪದವಿ ಪಡೆದಿರುವುದು ವಿಶೇಷ ಸಂಗತಿ. ಎಲ್ಲರಿಗೂ ಈ ಅವಕಾಶ ಸಿಗದು. ಸಂಸ್ಥೆಯು ಭವಿಷ್ಯದಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವಾಗುವತ್ತ ಹೆಜ್ಜೆ ಇಡಬೇಕು ಎಂದು ಆಶಿಸಿದರು.

ಅಂತರರಾಷ್ಟ್ರೀಯ ವಾಕ್‌ದೋಷ ಮತ್ತು ಚಿಕಿತ್ಸಕರ ಸಂಘದ ಅಧ್ಯಕ್ಷ ಪ್ರೊ.ಆರ್‌.ರಂಗಸಾಯಿ ಮಾತನಾಡಿ, ಹೊಸ ಹೊಸ ವೈದ್ಯಕೀಯ ಆವಿಷ್ಕಾರಗಳು ಜನರನ್ನು ತಲುಪಲು ತಡವಾಗುತ್ತಿದೆ. ಈ ಕುರಿತು ನವ ಪದವೀಧರರು ಗಮನಹರಿಸಬೇಕು. ತಾವು ವೃತ್ತಿಪರರಾದ ಮೇಲೆ ತ್ವರಿತವಾಗಿ ರೋಗಗುಣಪಡಿಸುವ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಅವರು ಸೂಚಿಸಿದರು.

ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಪದವೀಧರರು ಭವಿಷ್ಯದಲ್ಲಿ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿರಬೇಕು. ಪಠ್ಯಾಧಾರಿಕ ಶಿಕ್ಷಣ ಹಾಗೂ ಪ್ರಾಯೋಗಿಕ ಜ್ಞಾನಗಳೆರಡೂ ಮುಖ್ಯವೇ. ಎರಡರ ಹದವಾದ ಬಳಕೆಯಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡುವುದು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಚಿನ್ನದ ಪದಕ:ಕಾರ್ಯಕ್ರಮದಲ್ಲಿ ಒಟ್ಟು 100 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 8 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಎಂಎಸ್ಸಿ ಆಡಿಯಾಲಜಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್‌.ರಕ್ಷಿತ್‌ ಅವರಿಗೆ ಡಾ.ವಿಜಯಲಕ್ಷ್ಮಿ ಭಾರದ್ವಾಜ್ ಚಿನ್ನದ ಪದಕ, ಎಂಎಸ್ಸಿ ವಾಕ್‌ ಭಾಷಾ ಔಷಧವಿಜ್ಞಾನದಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ ವಿ.ಪ್ರಿಯದರ್ಶಿನಿ ಅವರಿಗೆ ಜಯಲಕ್ಷ್ಮಮ್ಮ ಚಿನ್ನದ ಪದಕ, ಡಾ.ಆರ್‌.ಸುಂದರ್‌ ಚಿನ್ನದ ಪದಕ, ಟಿ.ವಿ.ಅಲಮೇಲು ಚಿನ್ನದ ಪದಕ, ಹಾಗೂ ಫ್ರೆಂಡ್ಸ್‌ ಯುನೈಟೆಡ್ ಆರ್ಗನೈಸೇಷನ್ ದತ್ತಿ ಬಹುಮಾನ, ಎಲಿಸಾ ಬೇಬಿ ಅವರಿಗೆ ಟಿ.ವಿ.ಅಲಮೇಲು ಚಿನ್ನದ ಪದಕ, ಶೇಜೀನ್‌ ಅಬ್ದುಲ್ ಗಫೂರ್ ಹಾಗೂ ಎಂ.ವರ್ಷಾ ಆತ್ರೇಯಾ ಅವರಿಗೆ ಆರ್.ಸುಮಿತ್ರಮ್ಮ ಮತ್ತು ಆರ್‌.ಕೆ.ರಾಜಗೋಪಾಲ್‌ ಚಿನ್ನದ ಪದಕ, ಎಂ.ಶ್ರದ್ಧಾ ಅವರಿಗೆ ವೆಂಕಟೇಶಮೂರ್ತಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.