ADVERTISEMENT

ಸಭೆಗಷ್ಟೇ ಸೀಮಿತ: ಪಾಲನೆಗಿಲ್ಲ ತುಡಿತ

ಸರಣಿ ಸಭೆಗೆ ಹೈರಾಣಾದ ಅಧಿಕಾರಿ ಸಮೂಹ: ತಳ ಹಂತದಲ್ಲಿ ಅನುಷ್ಠಾನಗೊಳ್ಳದ ಆದೇಶ

ಡಿ.ಬಿ, ನಾಗರಾಜ
Published 17 ಮೇ 2021, 3:11 IST
Last Updated 17 ಮೇ 2021, 3:11 IST
ಮೈಸೂರಿನಲ್ಲಿ ಭಾನುವಾರ ಕೋವಿಡ್ ತಪಾಸಣೆ ನಡೆಯಿತು
ಮೈಸೂರಿನಲ್ಲಿ ಭಾನುವಾರ ಕೋವಿಡ್ ತಪಾಸಣೆ ನಡೆಯಿತು   

ಮೈಸೂರು: ಕೊರೊನಾ ಸೋಂಕಿನ ಎರಡನೇ ಅಲೆ ಜಿಲ್ಲೆಯ ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ಸೋಂಕು ದಿನದಿಂದ ದಿನಕ್ಕೆ ಹರಡುವುದು ಹೆಚ್ಚುತ್ತಿದೆ. ಇದರ ಪರಿಣಾಮ ನಿತ್ಯವೂ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಜನರು ಸೋಂಕಿತರಾಗುತ್ತಿದ್ದಾರೆ. ಸಾವಿನ ಸರಣಿಯೂ ಮುಂದುವರೆದಿದೆ.

ಇದಕ್ಕೆ ವ್ಯತಿರಿಕ್ತ ಎಂಬಂತೆ ಸರ್ಕಾರದ ಕೋವಿಡ್‌ ನಿಯಮಾವಳಿ ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತಕ್ಕೆ ಸಹಕರಿಸಬೇಕಾದ, ಪಾಲಿಸಬೇಕಾದ ಪ್ರಮುಖರೇ ಮಾರ್ಗಸೂಚಿ ಉಲ್ಲಂಘನೆಯಲ್ಲಿ ನಿರತರಾಗಿರುವುದು ನಡೆದಿದೆ.

‘ಈಚೆಗಷ್ಟೇ ಸಂಸದರು ಕೋವಿಡ್‌ ಪೀಡಿತರಾದರು. ಪ್ರಸ್ತುತ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಪ್ರಕಾರ ಪ್ರಾಥಮಿಕ ಸಂಪರ್ಕಿತರೆಲ್ಲರೂ ಕನಿಷ್ಠ ಐದು ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಈ ಅವಧಿಯಲ್ಲಿ ಸೋಂಕಿನ ಯಾವುದಾದರೂ ಲಕ್ಷಣ ಗೋಚರಿಸಿದರೆ ಪರೀಕ್ಷೆಗೆ ಒಳಪಡ ಬೇಕು’ ಎಂದಿದೆ.

ADVERTISEMENT

‘ಆದರೆ, ನಾನು ನೋಡಿದಂತೆ ಸಂಸದರ ನೇರ ಸಂಪರ್ಕಕ್ಕೆ ಬಂದ ಹಲವು ರಾಜಕಾರಣಿಗಳು, ಅಧಿಕಾರಿಗಳು ಕ್ವಾರಂಟೈನ್‌ನಲ್ಲಿ ಇರಲೇ ಇಲ್ಲ. ಯಥಾಪ್ರಕಾರ ಎಲ್ಲೆಡೆ ಸಂಚರಿಸಿದರು. ಲಾಕ್‌ಡೌನ್‌ ಜಾರಿಗೊಳಿಸಿದ್ದು ಏತಕ್ಕಾಗಿ? ನಿಯಮಾವಳಿ ಜಾರಿಗೊಳಿಸುವವರು, ಪಾಲಿಸುವವರೇ ಈ ರೀತಿ ನಡೆದು ಕೊಂಡರೆ ಸಾಮಾನ್ಯ ಜನರಿಗೆ ಏನಂತ ತಿಳಿ ಹೇಳೋದು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಆಯಕಟ್ಟಿನ ಹುದ್ದೆಯಲ್ಲಿರುವ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಿಂಗಳಿನಿಂದ ಸರಣಿ ಸಭೆ: ‘ಉಪ ಚುನಾವಣೆ ಮುಗಿದ ಬೆನ್ನಿಗೆ, ಆರಂಭವಾದ ಸರಣಿ ಸಭೆ ನಿತ್ಯವೂ ತಪ್ಪಿಲ್ಲ. ಕೆಲವೊಮ್ಮೆ ಭಾನುವಾರವೂ ನಡೆದಿವೆ. ರಜೆ ದಿನವೂ ಹೊರತಾಗಿಲ್ಲ. ಇದರಿಂದ ಇದೀಗ ಅತ್ಯಗತ್ಯವಿರುವ ಕೋವಿಡ್‌–19ಗೆ ಸಂಬಂಧಿಸಿದ ಕೆಲವು ಪ್ರಮುಖ ಕೆಲಸಗಳನ್ನು ತಳ ಹಂತಕ್ಕೆ ತಲುಪಿಸಲಾಗದ ಅಸಹಾಯಕ ಸ್ಥಿತಿ ನಮ್ಮದಾಗಿದೆ. ದಿನವಿಡೀ ಸಭೆಯಲ್ಲೇ ಕುಳಿತು ಹೈರಾಣಾಗಿದ್ದೇವೆ’ ಎಂದು ಜಿಲ್ಲಾ ಹಂತದ ಹಲವು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

‘ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಟಾಸ್ಕ್‌ಫೋರ್ಸ್‌ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೇರಿದಂತೆ ಜಿಲ್ಲಾಧಿಕಾರಿ ಸಹ ನಿರಂತರವಾಗಿ ಸಭೆ ನಡೆಸುತ್ತಾರೆ. ಪ್ರಮುಖ ಸಭೆಗಳಲ್ಲಿ ಹಾಜರಾಗುವುದು ಒಳ್ಳೆಯದು. ನಮ್ಮ ಸಮಸ್ಯೆ ಹೇಳಿಕೊಳ್ಳ ಬಹುದು. ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ, ಎಲ್ಲ ಸಭೆಗೂ ಪ್ರಮುಖ ಅಧಿಕಾರಿಗಳು ಉಪಸ್ಥಿತರಿರಬೇಕಿದೆ.’

‘ಇದರ ಜೊತೆಗೆ ವಿಡಿಯೊ ಕಾನ್ಫರೆನ್ಸ್‌ನಲ್ಲೂ ಭಾಗಿಯಾಗಬೇಕಿದೆ. ಇದರಿಂದ ಕೆಳಗಿನ ಅಧಿಕಾರಿಗಳಿಗೆ ಕೆಲಸ ಹೇಳೋದಕ್ಕೂ ಆಗುತ್ತಿಲ್ಲ. ಅವರಿಂದ ಕೆಲಸ ಮಾಡಿಸುವುದು ಕಷ್ಟಸಾಧ್ಯವಾಗುತ್ತಿದೆ. ದಿನವಿಡೀ ಸಭೆಯಲ್ಲೇ ಕಳೆಯುತ್ತಿದ್ದೇವೆ. ಇದು ಸಹ ಕೋವಿಡ್‌ ಹರಡುವಿಕೆ ತಡೆಗಟ್ಟಲು ತೊಡಕಾಗಿದೆ’ ಎಂದು ಆಸ್ಪತ್ರೆಯೊಂದರ ಮುಖ್ಯಸ್ಥರು ತಿಳಿಸಿದರು.

‘ನಮ್ಮಲ್ಲಿನ ಲೋಪಗಳ ದೂರು ಬಂದಿದ್ದರೆ ದಿಢೀರ್‌ ಭೇಟಿ ನೀಡಿ ಎಚ್ಚರಿಕೆ ನೀಡಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ. ನಮ್ಮದೇನು ಅಭ್ಯಂತರವಿಲ್ಲ. ಸರಣಿ ಸಭೆಯಿಂದ ಹೈರಾಣಾಗಿದ್ದೇವೆ. ಕನಿಷ್ಠ ಪಕ್ಷ ವೆಬ್‌ಎಕ್ಸ್‌ ಸಭೆಗಳನ್ನಾದರೂ ನಡೆಸಲಿ’ ಎಂದು ವೈದ್ಯಾಧಿಕಾರಿಯೊಬ್ಬರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.