ADVERTISEMENT

ಮೈಮುಲ್‌ನ ಚುನಾಯಿತ ನಿರ್ದೇಶಕರ ಮಂಡಳಿಯ ಮೊದಲ ಸಭೆ: ಮತ್ತೊಮ್ಮೆ ಹಾಲಿನ ದರ ಹೆಚ್ಚಳ?

ಮೈಮುಲ್‌ನ ಚುನಾಯಿತ ನಿರ್ದೇಶಕರ ಮಂಡಳಿಯ ಮೊದಲ ಸಭೆ ಇಂದು: ಹಲವು ಮಹತ್ವದ ನಿರ್ಧಾರ ಪ್ರಕಟ

ಡಿ.ಬಿ, ನಾಗರಾಜ
Published 9 ಏಪ್ರಿಲ್ 2021, 2:16 IST
Last Updated 9 ಏಪ್ರಿಲ್ 2021, 2:16 IST
ಮೈಮುಲ್‌ ಕಚೇರಿ ಆವರಣ
ಮೈಮುಲ್‌ ಕಚೇರಿ ಆವರಣ   

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟಕ್ಕೆ (ಮೈಮುಲ್‌) ಐದು ವರ್ಷದ ಅವಧಿಗೆ ಈಚೆಗಷ್ಟೇ ಆಯ್ಕೆಗೊಂಡ ಅಧ್ಯಕ್ಷ–ನಿರ್ದೇಶಕರ ಆಡಳಿತ ಮಂಡಳಿಯ ಮೊದಲ ಸಭೆ ಶುಕ್ರವಾರ (ಏ.9) ನಡೆಯಲಿದೆ.

ಕೋವಿಡ್‌ನಿಂದಾಗಿ ಮೈಮುಲ್‌ನ ಆರ್ಥಿಕ ಸ್ಥಿತಿಗತಿಯಲ್ಲಿ ಹಲವು ಏರುಪೇರಿದ್ದರೂ; ಪ್ರಗತಿ ಕುಂಠಿತಗೊಂಡಿದ್ದರೂ, ಬೇಸಿಗೆ ಕಾಲದಲ್ಲಿ ಹೈನುಗಾರರಿಗೆ ನೆರವಾಗಲು ಹೊಸ ಆಡಳಿತ ಮಂಡಳಿ ಒಂದು ಲೀಟರ್‌ ಹಾಲಿಗೆ ₹1 ಧಾರಣೆಯನ್ನು ಹೆಚ್ಚಳ ಮಾಡಲಿದೆ ಎಂಬುದು ಗೊತ್ತಾಗಿದೆ.

ಹಲವು ನಿರ್ದೇಶಕರು 1 ಲೀಟರ್‌ ಹಾಲಿಗೆ ₹2 ಹೆಚ್ಚಿಸಬೇಕು ಎಂಬ ಪ್ರಸ್ತಾವ ಮಂಡಿಸಲು ಸಿದ್ಧತೆ ನಡೆಸಿಕೊಂಡಿದ್ದು, ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಿ ₹1 ಹೆಚ್ಚಿಸಬಹುದು ಎನ್ನಲಾಗಿದೆ.

ADVERTISEMENT

ಮಾರ್ಚ್‌ನಲ್ಲಷ್ಟೇ ಮೈಮುಲ್‌ ಹೈನುಗಾರರಿಗೆ ನೀಡುವ ಧಾರಣೆಯಲ್ಲಿ ₹1 ಹೆಚ್ಚಿಸಿತ್ತು. ಇದರಿಂದ ಪ್ರತಿಯೊಬ್ಬ ಹೈನುಗಾರರಿಗೆ ಇದೀಗ ಒಂದು ಲೀಟರ್ ಹಾಲಿಗೆ ₹24 ಸಿಗುತ್ತಿದೆ. ಇದೀಗ ಮತ್ತೊಮ್ಮೆ ₹1 ಹೆಚ್ಚಿಸಿದರೆ ಹಾಲು ಉತ್ಪಾದಕರಿಗೆ ಬೇಸಿಗೆಯಲ್ಲಿ ಬೋನಸ್‌ ಸಿಕ್ಕಂತಾಗುತ್ತದೆ. ಹಸುಗಳ ನಿರ್ವಹಣೆಗೂ ಅನುಕೂಲವಾಗಲಿದೆ. ಪ್ರತಿ ಲೀಟರ್‌ ಹಾಲಿಗೆ ಇನ್ಮುಂದೆ ₹25 ಸಿಗಲಿದೆ ಎಂಬ ಆಶಾಭಾವ ಜಿಲ್ಲೆಯ ಹಾಲು ಉತ್ಪಾದಕರದ್ದಾಗಿದೆ.

ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನ ₹5 ಸೇರಿದರೆ, ರೈತರಿಗೆ ಒಂದು ಲೀಟರ್‌ ಹಾಲಿಗೆ ₹30 ಸಿಗಲಿದೆ.

‘ಮೈಸೂರು ಜಿಲ್ಲೆಯಲ್ಲಿ ಅಂದಾಜು 2.14 ಲಕ್ಷ ಹಾಲು ಉತ್ಪಾದಕ ಕುಟುಂಬಗಳಿವೆ. ಇದರಲ್ಲಿ 95 ಸಾವಿರ ಕುಟುಂಬಗಳು ನಿತ್ಯವೂ ಮೈಮುಲ್‌ನ 1,090 ಸೊಸೈಟಿಗಳಿಗೆ ಹಾಲು ಮಾರಾಟ ಮಾಡುತ್ತಿವೆ’ ಎಂದು ಮೈಮುಲ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹಾಲಿನ ಪುಡಿ ಘಟಕ

ಹೊಸ ನಿರ್ದೇಶಕರ ಮಂಡಳಿ, ತಮ್ಮ ಐದು ವರ್ಷದ ಅವಧಿಯಲ್ಲಿ ಕೈಗೊಳ್ಳಬಹುದಾದ ಹಲವು ಅಭಿವೃದ್ಧಿ ಯೋಜನೆಗಳನ್ನು ಮೊದಲ ಸಭೆಯಲ್ಲೇ ಪ್ರಸ್ತಾಪಿಸಲು ಸಜ್ಜಾಗಿದೆ.

ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚಳಗೊಳ್ಳುತ್ತಿದ್ದು, ಹಾಲನ್ನು ಸದ್ಬಳಕೆ ಮಾಡಿಕೊಳ್ಳಲಿಕ್ಕಾಗಿ ₹50 ಕೋಟಿ ವೆಚ್ಚದ ಹಾಲಿನ ಪುಡಿ ತಯಾರಿಕಾ ಘಟಕ ಸ್ಥಾಪಿಸಲು ಸಭೆಯಲ್ಲಿ ಪ್ರಸ್ತಾವ ಮಂಡಿಸಿ, ಅನುಮೋದನೆ ಪಡೆದುಕೊಳ್ಳಲಿದೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.