ADVERTISEMENT

‘ಸಚಿವರು ನೀಡಿರುವುದು ಪತ್ರವಷ್ಟೇ, ಆದೇಶವಲ್ಲ’

3 ಬಡಾವಣೆಗಳು ‘ಬಿ’ ಖರಾಬಿನಿಂದ ಮುಕ್ತಗೊಂಡಿಲ್ಲ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 2:26 IST
Last Updated 18 ಜುಲೈ 2020, 2:26 IST
ಎಂ.ಕೆ.ಸೋಮಶೇಖರ್‌
ಎಂ.ಕೆ.ಸೋಮಶೇಖರ್‌   

ಮೈಸೂರು: ಸಿದ್ಥಾರ್ಥನಗರ, ಕೆ.ಸಿ.ಬಡಾವಣೆ ಹಾಗೂ ಜೆ.ಸಿ.ಬಡಾವಣೆಗಳನ್ನು ‘ಬಿ’ ಖರಾಬಿನಿಂದ ಮುಕ್ತಗೊಳಿಸ ಲಾಗಿದೆ ಎಂದು ಸುಳ್ಳು ಹೇಳಿ ಕಂದಾಯ ಸಚಿವ ಆರ್‌.ಅಶೋಕ್‌ ಜನರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್‌ ದೂರಿದರು.

‘ಮೊನ್ನೆ ನಗರಕ್ಕೆ ಬಂದಿದ್ದ ಅಶೋಕ್‌ ಅವರು ‘ಬಿ’ ಖರಾಬಿನಿಂದ ಮುಕ್ತಗೊಳಿಸುವ ಕುರಿತು ಆದೇಶ ಹೊರಡಿಸಿದ್ದೇನೆ ಎಂದು ದಾಖಲೆ ತೋರಿಸಿದ್ದರು. ಆದರೆ, ಅವರು ತೋರಿಸಿದ್ದು ಪತ್ರವಷ್ಟೇ. ಆದೇಶವಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘2018ರ ಮಾರ್ಚ್‌ನಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಪತ್ರದಲ್ಲಿವೆ. ಅದನ್ನು ಹೊರತುಪಡಿಸಿ ಬೇರೆ ಏನೂ ಇಲ್ಲ. ಬಡಾವಣೆಗಳನ್ನು ಮುಡಾಕ್ಕೆ ಹಸ್ತಾಂತರಿಸಬೇಕು ಎಂದು ಅಂದೇ ತೀರ್ಮಾನ ಆಗಿತ್ತು. ಅಂದು ನಡೆದ ಸಂಪುಟ ಸಭೆಯ ಬೆನ್ನಲ್ಲೇ ಚುನಾವಣೆ ಬಂದಿತ್ತು. ಆದ್ದರಿಂದ ಆದೇಶ ಹೊರಡಿಸಲು ನಮ್ಮ ಕೈಯಿಂದ ಆಗಿರಲಿಲ್ಲ’ ಎಂದರು.

ADVERTISEMENT

‘ಸಂಪುಟದಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನು ನ್ಯಾಯಾಲಯದ ಗಮನಕ್ಕೆ ತರಲು ನಿರ್ಧರಿಸಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ ಒಂದೂವರೆ ವರ್ಷ ಕಳೆದರೂ ಈ ವಿಷಯವನ್ನು ಇನ್ನೂ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ನಾವು ಮಾಡಿದ ಕೆಲಸ ಬಿಟ್ಟು ಈ ಸರ್ಕಾರ ಒಂದು ಹೆಜ್ಜೆ ಕೂಡ ಮುಂದೆ ಇಟ್ಟಿಲ್ಲ’ ಎಂದು ಟೀಕಿಸಿದರು.

‘ಬಿ’ ಖರಾಬಿನಿಂದ ಮುಕ್ತಗೊಳಿಸುವ ಕುರಿತು ಮುಂದಿನ ಕ್ರಮಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರ ಹಿಡಿದುಕೊಂಡು ಬಂದು ಕಂದಾಯ ಸಚಿವರು ನಾನು ಆದೇಶ ಹೊರಡಿಸಿದ್ದೇನೆ
ಎನ್ನುತ್ತಿದ್ದಾರೆ. ಆದೇಶ ಎಲ್ಲಿದೆ’ ಎಂದು ಪ್ರಶ್ನಿಸಿದರು.

‘ಈ ರೀತಿ ಜನರಿಗೆ ಮೋಸ ಮಾಡುವುದನ್ನು ಖಂಡಿಸುತ್ತೇನೆ. ಕಂದಾಯ ಸಚಿವರು ಆದೇಶ ಹೊರಡಿಸಿದ ಬಳಿಕ ಬಂದು ಘೋಷಿಸಲಿ. ಸುಳ್ಳು ಹೇಳುವುದು ಸರಿಯಲ್ಲ’ ಎಂದರು.

ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಪಾಲಿಕೆ ಮಾಜಿ ಸದಸ್ಯ ಸುನಿಲ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.