ADVERTISEMENT

ಪ್ರಧಾನಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ: ಮೋದಿ ವಿರುದ್ಧ ರೆಹಮಾನ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 9:13 IST
Last Updated 10 ಏಪ್ರಿಲ್ 2019, 9:13 IST
ರೆಹಮಾನ್‌ ಖಾನ್‌
ರೆಹಮಾನ್‌ ಖಾನ್‌   

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ದೇಶದ ಸಂವಿಧಾನ, ಸುಪ್ರೀಂ ಕೋರ್ಟ್‌ ಮತ್ತು ಚುನಾವಣಾ ಆಯೋಗಕ್ಕಿಂತ ತಾನೇ ಮೇಲು ಎಂಬ ಅಹಂಕಾರ ಬಂದಿದೆ ಎಂದು ಕಾಂಗ್ರೆಸ್‌ ಮುಖಂಡ ಕೆ.ರೆಹಮಾನ್‌ ಖಾನ್‌ ಟೀಕಿಸಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಸಂವಿಧಾನ ಇಡೀ ವಿಶ್ವದಲ್ಲೇ ಶ್ರೇಷ್ಠವಾದುದು. ಆದರೆ ಪ್ರಧಾನಿಗೆ ಅಂತಹ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು.

ಮೋದಿ ಅವರನ್ನು ಟೀಕಿಸಿದವರಿಗೆ ದೇಶವಿರೋಧಿ ಎಂಬ ಪಟ್ಟಕಟ್ಟಲಾಗುತ್ತಿದೆ. ಇಂತಹ ಮನೋಭಾವ ಹೊಂದಿರುವವರ ಕೈಗೆ ಇನ್ನೊಮ್ಮೆ ಅಧಿಕಾರ ನೀಡಿದರೆ ದೇಶದ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.

ADVERTISEMENT

ಬಿಜೆಪಿಯನ್ನು ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಹೋಗಿ ಎನ್ನಲು ಇವರು ಯಾರು, ಪಾಕಿಸ್ತಾನಕ್ಕೆ ಹೋಗಿ ಬಂದದ್ದು ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿಯನ್ನು ಆಹ್ವಾನಿಸಿದ್ದು ಮೋದಿ ಅಲ್ಲದೆ ಇನ್ಯಾರು ಎಂದು ಕೇಳಿದರು.

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ದಿ ಕೆಲಸ ನಡೆದಿಲ್ಲ. ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಪ್ರಧಾನಿಗೆ ಅಭಿವೃದ್ದಿಯ ಬಗ್ಗೆ ಮಾತನಾಡಲು ಆಗುತ್ತಿಲ್ಲ. ಆದ್ದರಿಂದ ಸರ್ಜಿಕಲ್‌ ಸ್ಟ್ರೈಕ್‌ ವಿಷಯವನ್ನು ಎತ್ತಿಕೊಂಡಿದ್ದಾರೆ ಎಂದು ಟೀಕಿಸಿದರು.

ಸೇನೆಯು ಮೋದಿ ಅಥವಾ ರಾಹುಲ್‌ ಗಾಂಧಿಗೆ ಸೇರಿದ್ದಲ್ಲ. ಅದು ಇಡೀ ದೇಶಕ್ಕೆ ಸೇರಿದ್ದು. ಸೇನೆ ನಡೆಸಿದ ಕಾರ್ಯಾಚರಣೆ ತನ್ನ ಸಾಧನೆ ಎಂದು ಪ್ರಧಾನಿ ಬಿಂಬಿಸುತ್ತಿದ್ದಾರೆ. ಆ ಮೂಲಕ ಸೇನೆಗೆ ಅಗೌರವ ತೋರಿದ್ದಾರೆ ಎಂದು ಹರಿಹಾಯ್ದರು.

ಎಲ್ಲವೂ ಸರಿಯಾಗಲಿದೆ: ಮೈತ್ರಿಯಲ್ಲಿ ಕೆಲವು ಕಡೆ ಗೊಂದಲಗಳಿವೆ. ಆದರೆ ನಾಯಕರು ಜತೆಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಕೂಡಾ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ರೆಹಮಾನ್‌ ಖಾನ್‌ ಅವರ ಪುತ್ರ ಮನ್ಸೂರ್‌ ಖಾನ್‌, ಪಕ್ಷದ ಇತರ ಮುಖಂಡರು ಹಾಜರಿದ್ದರು.

**

ಈ ದೇಶದ ಸಾಮಾನ್ಯ ಪ್ರಜೆಯನ್ನು ದೇಶದ್ರೋಹಿ ಎನ್ನಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕಾರ ಕೊಟ್ಟವರು ಯಾರು?
–ರೆಹಮಾನ್‌ ಖಾನ್‌ ,ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.