ADVERTISEMENT

ಮುಂಗಾರು: ಮೈಸೂರು ಜಿಲ್ಲೆಯಲ್ಲಿ ಬಿತ್ತನೆ ಗುರಿ ಇಳಿಕೆ!

ಕೃಷಿ ಚಟುವಟಿಕೆಗಳಿಗೆ ರೈತರಿಂದ ಸಿದ್ಧತೆ; ಪರಿಕರ ಒದಗಿಸಲು ಇಲಾಖೆಯಿಂದಲೂ ತಯಾರಿ

ಎಂ.ಮಹೇಶ
Published 20 ಮೇ 2025, 7:35 IST
Last Updated 20 ಮೇ 2025, 7:35 IST
ಕೆ.ಎಚ್‌. ರವಿ
ಕೆ.ಎಚ್‌. ರವಿ   

ಮೈಸೂರು: ಕೃಷಿ ಚಟುವಟಿಕೆಗಳ ‘ಸೊಗಸು’ ಕಂಡುಬರುವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.74 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಇದು ಹೋದ ವರ್ಷಕ್ಕಿಂತ 16ಸಾವಿರ ಹೆಕ್ಟೇರ್ ಕಡಿಮೆಯಾಗಿದೆ.

ಮಳೆರಾಯನ ಆಗಮನಕ್ಕೆ ಕಾಯುತ್ತಿರುವ ಕೃಷಿಕರು ಭೂಮಿ ಹದಗೊಳಿಸುವುದು ಮೊದಲಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಬಿತ್ತನೆಬೀಜ, ರಸಗೊಬ್ಬರ ಮೊದಲಾದ ಪರಿಕರಗಳನ್ನು ಕಲ್ಪಿಸುವುದಕ್ಕಾಗಿ ಕೃಷಿ ಇಲಾಖೆಯಿಂದಲೂ ತಯಾರಿ ನಡೆದಿದೆ.

ಕೆಲವು ದಿನಗಳಿಂದ ಬೀಳುತ್ತಿರುವ ಮಳೆಯು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ. ಆಶಾದಾಯಕ ಮುಂಗಾರಿನ ನಿರೀಕ್ಷೆಯಲ್ಲಿ ರೈತರು ಹಾಗೂ ಇಲಾಖೆ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜೂನ್‌ ಮೊದಲ ವಾರದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆಯನ್ನು ಹೊಂದಲಾಗಿದೆ.

ADVERTISEMENT

ಹೋದ ವರ್ಷ, ಮುಂಗಾರು ಹಂಗಾಮಿನಲ್ಲಿ 2.80 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶ 1.10 ಲಕ್ಷ ಹೆಕ್ಟೇರ್ ಸೇರಿ ಒಟ್ಟು 3.90 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಬಾರಿ ಇದರ ಪ್ರಮಾಣ ಇಳಿಕೆಯಾಗಿದೆ. ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಅಂಕಿ–ಅಂಶಗಳನ್ನು ಆಧರಿಸಿ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಸೋಮವಾರದವರೆಗೆ ಶೇ 16.4ರಷ್ಟು ಬಿತ್ತನೆಯಾಗಿದೆ.

ಏನೇನು ಬೆಳೆ?: ಭತ್ತ, ರಾಗಿ, ಮುಸುಕಿನಜೋಳ ಸೇರಿದಂತೆ ಏಕದಳ ಧಾನ್ಯಗಳು, ಉದ್ದು, ಹೆಸರು, ಅಲಸಂದೆ ಮೊದಲಾದ ದ್ವಿದಳ ಧಾನ್ಯಗಳು, ಸೂರ್ಯಕಾಂತಿ ಮೊದಲಾದ ಎಣ್ಣೆಕಾಳು, ಹತ್ತಿ, ಕಬ್ಬು (ಕೂಳೆ, ಹೊಸದು), ತಂಬಾಕು ಮೊದಲಾದ ವಾಣಿಜ್ಯ ಬೆಳೆಗಳನ್ನು ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ರೈತ ಸಂಪರ್ಕ ಕೇಂದ್ರದ ಮೂಲಕ ಬಿತ್ತನೆಬೀಜಗಳನ್ನು ಒದಗಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಸದ್ಯ ಗೋದಾಮುಗಳಲ್ಲಿರುವ 13,391 ಮೆಟ್ರಿಕ್‌ ಟನ್‌ ಸೇರಿದಂತೆ ಒಟ್ಟು 68,300 ಮೆಟ್ರಿಕ್‌ ಟನ್‌ ರಸಗೊಬ್ಬರ ಲಭ್ಯವಿದೆ. ಪ್ರಮುಖ ಬೆಳೆಯಾದ ಭತ್ತವನ್ನು (89ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿದೆ) ಜುಲೈ ನಂತರ ನಾಟಿ ಮಾಡಲಾಗುತ್ತದೆ. ಆದ್ದರಿಂದ ಸದ್ಯಕ್ಕೆ ಭತ್ತವನ್ನು ಬಿಟ್ಟು ಇತರೆಲ್ಲ ಬೀಜಗಳನ್ನೂ ಕೊಡಲಾಗುತ್ತಿದೆ.

ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾದರಿಗಳನ್ನು ಪಡೆದು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಬಿತ್ತನೆ ಬೀಜಗಳನ್ನು ‘ಕೆ–ಕಿಸಾನ್‌’ ಮೂಲಕ ‘ಕ್ಯೂ ಆರ್‌ ಕೋಡ್’ ಸ್ಕ್ಯಾನಿಂಗ್ ಮಾಡಿ ವಿತರಿಸಲಾಗುತ್ತಿದೆ. ಇದರಿಂದ, ಬೀಜವು ಯಾವ ರೈತರಿಗೆ ಹಂಚಿಕೆಯಾಗಿದೆ ಎಂಬುದು ನಿಖರವಾಗಿ ಗೊತ್ತಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕೊರತೆ ಆಗದಂತೆ ಕ್ರಮ: ‘ಈ ಬಾರಿ ಆಶಾದಾಯಕ ಮುಂಗಾರಿನ ನಿರೀಕ್ಷೆ ಇದೆ. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಯಾವುದಕ್ಕೂ ಕೊರತೆ ಇಲ್ಲ. ಬೇಡಿಕೆಗಿಂತಲೂ ಜಾಸ್ತಿ ಪ್ರಮಾಣದಲ್ಲೇ ಲಭ್ಯವಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿಎಪಿ ಗೊಬ್ಬರವನ್ನು ರೈತರು ಅಗತ್ಯಕ್ಕಿಂತ ಜಾಸ್ತಿ ಬಳಸುತ್ತಿದ್ದಾರೆ. ಇದಕ್ಕೆ ಪರ್ಯಾಯವಾದ (ಎನ್‌ಪಿಕೆ) ಗೊಬ್ಬರಗಳನ್ನು ಬಳಸಬೇಕು. ಅವು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಸುವುದರಿಂದ ಸಮತೋಲನ ಕಾಪಾಡಿಕೊಂಡಂತೆಯೂ ಆಗುತ್ತದೆ. ಮಣ್ಣಿನ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಯೂರಿಯಾ ಗೊಬ್ಬರವನ್ನು ಕೂಡ ಯಥೇಚ್ಛವಾಗಿ ಬಳಸಲಾಗುತ್ತಿರುವುದು ಕಂಡುಬಂದಿದೆ. ಅದನ್ನೂ ಹಿತಮಿತವಾಗಿ ಬಳಸಬೇಕು. ಈ ನಿಟ್ಟಿನಲ್ಲಿ ರೈತ ಸಂಪರ್ಕ ಕೇಂದ್ರದವರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಳ್ಳಬೇಕು’ ಎಂಬ ಸಲಹೆ ಅವರದು.

‘ಮಣ್ಣು ಪರೀಕ್ಷೆಯನ್ನು ನಿರಂತರವಾಗಿ ನಡೆಸಲಾಗುತ್ತಲೇ ಇದೆ. ಇಲಾಖೆಯಿಂದ ವರ್ಷಕ್ಕೆ 10ಸಾವಿರದಿಂದ 11ಸಾವಿರ ಮಾದರಿಗಳ ಪರೀಕ್ಷೆ ನಡೆಸುತ್ತಿದ್ದೇವೆ. ತಾಲ್ಲೂಕುಮಟ್ಟದಲ್ಲಿ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.