ADVERTISEMENT

ಮುಡಾ ಅಕ್ರಮ: ತನಿಖೆ ಆರಂಭ

ತಾಂತ್ರಿಕ ಸಮಿತಿಯಿಂದ ದಾಖಲೆಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 16:21 IST
Last Updated 17 ಆಗಸ್ಟ್ 2022, 16:21 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ   

ಮೈಸೂರು: ಬದಲಿ ನಿವೇಶನ ಮಂಜೂರಾತಿಯಲ್ಲಿ ಅವ್ಯವಹಾರ, ನಾಗರಿಕ ಸೌಲಭ್ಯ (ಸಿಎ) ನಿವೇಶನಗಳ ಹಂಚಿಕೆಯಲ್ಲಿ ಲೋಪ ಸೇರಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ತನಿಖೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.

ರಾಜ್ಯ ಸರ್ಕಾರದಿಂದ ನೇಮಿಸಿರುವ ತಾಂತ್ರಿಕ ಸಮಿತಿಯು ಗುರುವಾರ ಪ್ರಾಧಿಕಾರಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಬೆಂಗಳೂರಿನ ನಗರ ಹಾಗೂ ಗ್ರಾಮೀಣ ಯೋಜನೆ ಹೆಚ್ಚುವರಿ ನಿರ್ದೇಶಕ ಟಿ.ವಿ.ಮುರಳಿ ನೇತೃತ್ವದ ನಾಲ್ವರು ಸದಸ್ಯರ ತಂಡ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತನಿಖೆ ವೇಳೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಆಯುಕ್ತರಿಗೆ ಸೂಚಿಸಲಾಗಿತ್ತು.

ADVERTISEMENT

ಸಮಿತಿಯು ಮೊದಲಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಬಳಿಕ, ಮುಡಾ ಕಚೇರಿಯಲ್ಲಿ ಅಧ್ಯಕ್ಷರ ಶಾಖೆ, ಆಯುಕ್ತರ ಶಾಖೆ, ನಗರ ಯೋಜನಾ ಶಾಖೆ, ತಾಂತ್ರಿಕ ಶಾಖೆ, ದಾಖಲೆಗಳ ವಿಭಾಗ ಮೊದಲಾದ ಕಡೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದೆ. ಕಡತಗಳನ್ನು ಮತ್ತು ಲಭ್ಯ ಮಾಹಿತಿಯನ್ನು ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಒದಗಿಸಿದರು ಎಂದು ತಿಳಿದುಬಂದಿದೆ. ಅವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಂಡವು ಸಮಗ್ರವಾಗಿ ಕಲೆ ಹಾಕಿದೆ. ಕೆಲವು ಅಧಿಕಾರಿಗಳ ಹೇಳಿಕೆಗಳನ್ನೂ ಪಡೆದುಕೊಂಡಿದೆ.

ಆರ್‌ಟಿಐ ಕಾರ್ಯಕರ್ತರಾದ ಗಂಗರಾಜು, ಶ್ರೀನಿವಾಸ್ ಸೇರಿ ಕೆಲವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆಯೂ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಇದೆಲ್ಲವನ್ನೂ ಆಧರಿಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ ಸೂಚಿಸಿದೆ.

‘ಅನುದಾನ ದುರ್ಬಳಕೆ, ಭೂಸ್ವಾಧೀನ ಪರಿಹಾರ ನೀಡುವಲ್ಲಿ ನಿಯಮ ಉಲ್ಲಂಘನೆ, ಕಾಯ್ದೆಗೆ ವಿರುದ್ಧವಾಗಿ ನಿರ್ಣಯ, ಕಡತಗಳನ್ನು ತಿದ್ದಿರುವುದು, ನಾಶಪಡಿಸಿರುವುದು, ಪ್ರಾಧಿಕಾರದ ಅಧ್ಯಕ್ಷರು ಮತ್ತು ಆಯುಕ್ತರು ಪರಸ್ಪರ ಸಲ್ಲಿಸಿರುವ ದೂರುಗಳು, ಖಾತೆ ವರ್ಗಾವಣೆಯಲ್ಲಿ ನಿಯಮಬಾಹಿರ ತೀರ್ಮಾನ ಮೊದಲಾದ ವಿಷಯಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಎಸ್‌ಬಿಐನಲ್ಲಿ ಇಡಲಾಗಿದ್ದ ₹ 250 ಕೋಟಿ ಎಫ್‌ಡಿ ಮೊತ್ತವನ್ನು ವಾಪಸ್ ಪಡೆದು ಬೇರೆ ಬ್ಯಾಂಕ್‌ನಲ್ಲಿ ಇಟ್ಟಿದ್ದರಿಂದ ತಿಂಗಳಿಗೆ ₹ 1 ಕೋಟಿ ನಷ್ಟವಾಗಿದೆ ಎಂಬ ದೂರು ಕೂಡ ಕೇಳಿಬಂದಿತ್ತು. ಇದೆಲ್ಲವನ್ನೂ ತನಿಖೆಗೆ ಒಳಪಡಿಡಲಾಗಿದೆ.

‘ಮುಡಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮುಚ್ಚಿಟ್ಟಿದ್ದ ₹ 5 ಸಾವಿರ ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ. 13ಸಾವಿರ ನಿವೇಶನಗಳು ಪತ್ತೆಯಾಗಿವೆ. ಅವುಗಳನ್ನು ಹಂಚಿಕೆಯಾಗಲಿ, ಹರಾಜಿನ ಮೂಲಕವಾಗಲಿ ವಿಲೇವಾರಿ ಮಾಡದಿರುವುದು ಗಮನಕ್ಕೆ ಬಂದಿದೆ’ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಈಚೆಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.