ADVERTISEMENT

ನಗರಸಭೆ; ಖಾಸಗಿ ಕೊಳವೆ ಬಾವಿ ಎರವಲು

ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

​ಪ್ರಜಾವಾಣಿ ವಾರ್ತೆ
Published 3 ಮೇ 2019, 4:34 IST
Last Updated 3 ಮೇ 2019, 4:34 IST
ಹುಣಸೂರು ನಗರದ ನಗರಸಭೆ ಎರವಲು ಪಡೆದ ಕೊಳವೆ ಬಾವಿಯಿಂದ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ಪೌರಾಯುಕ್ತೆ ವೀಣಾ ಆಳ್ವ ಚಾಲನೆ ನೀಡಿದರು
ಹುಣಸೂರು ನಗರದ ನಗರಸಭೆ ಎರವಲು ಪಡೆದ ಕೊಳವೆ ಬಾವಿಯಿಂದ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ಪೌರಾಯುಕ್ತೆ ವೀಣಾ ಆಳ್ವ ಚಾಲನೆ ನೀಡಿದರು   

ಹುಣಸೂರು: ನಗರದಲ್ಲಿ ಕುಡಿಯುವ ನೀರಿನ ಬವಣೆಯನ್ನು ಸ್ವಲ್ಪಮಟ್ಟಿಗೆ ಸುಧಾರಿಸುವ ನಿಟ್ಟಿನಲ್ಲಿ ನಗರಸಭೆಯ ಮೊದಲ ಪ್ರಯತ್ನ ಯಶಸ್ಸು ಕಂಡಿದೆ.

ನಗರಸಭೆ ಪೌರಾಯುಕ್ತೆ ವೀಣಾ ಆಳ್ವ ನೇತೃತ್ವದಲ್ಲಿ ಬುಧವಾರ ನಗರದ ಖಾಸಗಿ ಬಡಾವಣೆಯಲ್ಲಿ ಕೊರೆದಿದ್ದ ಕೊಳವೆ ಬಾವಿಯನ್ನು ವಶಕ್ಕೆ ಪಡೆದು ಮಾರುತಿ ಬಡಾವಣೆ ಹಾಗೂ ಗೋಕುಲ ಬಡಾವಣೆಯ ನಾಗರಿಕರಿಗೆ ತಾತ್ಕಾಲಿಕವಾಗಿ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವೇಳೆ ಮಾತನಾಡಿದ ವೀಣಾ ಆಳ್ವ ಅವರು ‘ನಗರದಲ್ಲಿ ನೀರಿನ ಕ್ಷಾಮ ಹೆಚ್ಚಾಗಿದೆ. ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ 90 ಕೊಳವೆ ಬಾವಿಗಳ ನಿರ್ವಹಣೆ ಮಾಡಿದ್ದರೂ, ಕುಡಿಯುವ ನೀರಿಗೆ ಕೊರತೆಯಾಗಿದೆ. ಜತೆಗೆ ನಗರಸಭೆ ವ್ಯಾಪ್ತಿಯ 5 ವಾರ್ಡ್‌ನ ನಾಗರಿಕರು ತೀವ್ರ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಈ ಬಡಾವಣೆಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಈಗಾಗಲೇ ನಗರ ವ್ಯಾಪ್ತಿಯಲ್ಲಿ ಉತ್ತಮ ನೀರು ಇರುವ 10 ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆ ಕೊಳವೆ ಬಾವಿ ಮಾಲೀಕರ ಮನವೊಲಿಸಿ ಅದರಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಅದರ ಮೊದಲ ಹಂತವಾಗಿ ಮಾರುತಿ ಬಡಾವಣೆಯ ಖಾಸಗಿ ವ್ಯಕ್ತಿಯಿಂದ ಕೊಳವೆ ಬಾವಿ ಪಡೆದು ಪೈಪ್ ಲೈನ್‌ಗೆ ಸಂಪರ್ಕ ಕಲ್ಪಿಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಿಷೇಧ: ನಗರ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಕೊಳವೆ ಬಾವಿ ಕೊರೆಯುವ ಮುನ್ನ ನಗರಸಭೆ ಅನುಮತಿ
ಪಡೆಯಬೇಕು. ಅಕ್ರಮವಾಗಿ ಕೊರೆಯುವುದು ಗಮನಕ್ಕೆ ಬಂದಲ್ಲಿ ಬೋರ್‌ವೆಲ್‌ ಲಾರಿ ಸೇರಿದಂತೆ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.