ADVERTISEMENT

ನಾಗವಾಲದಲ್ಲಿ ದಂಪತಿ ಭೀಕರ ಕೊಲೆ

ಆರೋಪಿಗಳ ಪತ್ತೆಗೆ ಪೊಲೀಸರಿಂದ ತನಿಖಾ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:39 IST
Last Updated 14 ಮೇ 2019, 20:39 IST

ಮೈಸೂರು: ತಾಲ್ಲೂಕಿನ ನಾಗವಾಲ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿಯನ್ನು ಸೋಮವಾರ ರಾತ್ರಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಲಾಗಿದೆ. ಇದು ಸ್ಥಳೀಯರಲ್ಲಿ ತಲ್ಲಣ ಮೂಡಿಸಿದೆ.

ಗ್ರಾಮದ ವೀರಪ್ಪ (70) ಹಾಗೂ ಪತ್ನಿ ಶಿವಮ್ಮ (60) ಕೊಲೆಯಾದವರು. ಇವರಿಬ್ಬರು ಮಾತ್ರವೇ ತೋಟದ ಮನೆಯಲ್ಲಿ ವಾಸವಿದ್ದರು. ಇವರ ಪುತ್ರ ಮಲ್ಲಿಕಾರ್ಜುನಸ್ವಾಮಿ ಮಂಗಳವಾರ ಬೆಳಿಗ್ಗೆ ತೋಟಕ್ಕೆ ಹೋದಾಗ ಕೊಲೆಯಾಗಿರುವುದು ಗೊತ್ತಾಗಿದೆ.

ದಂಪತಿಗೆ ಸೇರಿದ ಟ್ರಂಕ್‌ವೊಂದು ಮನೆಯಿಂದ 200 ಮೀಟರ್‌ ದೂರದಲ್ಲಿ ಬಿದ್ದಿದ್ದು, ಅದರಲ್ಲಿದ್ದ ಬಟ್ಟೆಗಳು ಹಾಗೂ ಕಾಗದಪತ್ರಗಳನ್ನು ಚಿಲ್ಲಾಪಿಲ್ಲಿಯಾಗಿ ಹರಡಲಾಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.

ADVERTISEMENT

ಇವರಿಗೆ ನಾಗರತ್ನ, ಮಲ್ಲಿಮಣಿ, ಸುಶೀಲಾ ಹಾಗೂ ವಿಜಯಕುಮಾರಿ ಎಂಬ ಪುತ್ರಿಯರು ಇದ್ದಾರೆ. ಇವರೆಲ್ಲರೂ ಬೇರೆ ಬೇರೆ ಊರಿನಲ್ಲಿ ವಾಸವಿದ್ದಾರೆ.

ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮದಲ್ಲಿದ್ದ ಪುತ್ರ ಮಲ್ಲಿಕಾರ್ಜುನಸ್ವಾಮಿ ಅವರ ಮನೆಯಲ್ಲಿ ಇರುತ್ತಿದ್ದ ದಂಪತಿ ಸಂಜೆಯ ನಂತರ ಗ್ರಾಮದಿಂದ 1 ಕಿ.ಮೀ ದೂರದಲ್ಲಿದ್ದ ತಮ್ಮ 5.5 ಎಕರೆ ಮಾವಿನತೋಟಕ್ಕೆ ತೆರಳಿ ಅಲ್ಲಿದ್ದ ಗುಡಿಸಲಿನಲ್ಲಿ ಮಲಗುತ್ತಿದ್ದರು. ಸೋಮವಾರವಷ್ಟೇ ಇವರು ಗ್ರಾಮಕ್ಕೆ ಬಂದು ಹೋಗಿದ್ದರು.

ಪುತ್ರ ಮತ್ತು ಪುತ್ರಿಯರ ಮಧ್ಯೆ ಆಸ್ತಿಯ ವಿಚಾರಕ್ಕೆ ವಿವಾದ ನ್ಯಾಯಾಲಯದಲ್ಲಿತ್ತು. ಕಳೆದ ಎರಡು ವರ್ಷದ ಹಿಂದೆ ಈ ವಿವಾದವು ಬಗೆಹರಿದಿತ್ತು. 8 ತಿಂಗಳ ಹಿಂದೆಯಷ್ಟೇ ತೋಟವನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಒಪ್ಪಿ ಲಕ್ಷಾಂತರ ರೂಪಾಯಿ ಹಣವನ್ನು ಮುಂಗಡ ಪಡೆಯಲಾಗಿತ್ತು. ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಶ್ವಾನದಳವು ಟ್ರಂಕ್‌ ಬಿದ್ದಿರುವ ಜಾಗಕ್ಕೆ ಹೋಗಿ ಅಲ್ಲಿಂದ ಗ್ರಾಮದ ಕಡೆಗೆ ಬಂದಿದೆ. ಮತ್ತೆ ಅಲ್ಲಿಂದ ಗ್ರಾಮದ ಸಮೀಪ ಇರುವ ಖಾಲಿ ಜಾಗದವರೆಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮೈಸೂರು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನ, ಹೆಚ್ಚುವರಿ ಎಸ್‌.ಪಿ ಸ್ನೇಹಾ, ಡಿವೈಎಸ್‌ಪಿ ಕ್ಷಮಾಮಿಶ್ರಾ, ಮೈಸೂರು ವೃತ್ತದ ಸಿಪಿಐ ಮಹೇಶ್‌ಪ್ರಸಾದ್, ಕೆ.ಆರ್‌.ನಗರ ಸಿಪಿಐ ರಾಜು, ಇಲವಾಲ ಸಬ್‌ಇನ್‌ಸ್ಪೆಕ್ಟರ್ ಮಮತಾ, ಜಯಪುರ ಠಾಣೆಯ ಅಶೋಕ್ ಹಾಗೂ ಮೈಸೂರು ಗ್ರಾಮಾಂತರ ಠಾಣೆಯ ಜಯಪ್ರಕಾಶ್ ಭೇಟಿ ನೀಡಿದ್ದರು.

ಡಿವೈಎಸ್‌ಪಿ ಕ್ಷಮಾಮಿಶ್ರಾ ನೇತೃತ್ವದಲ್ಲಿ ತನಿಖಾ ತಂಡವನ್ನು ಧರ್ಮೇಂದ್ರಕುಮಾರ್ ಮೀನ ರಚಿಸಿದ್ದಾರೆ. ಇದರಲ್ಲಿ ಮೈಸೂರು ಗ್ರಾಮಾಂತರ ಹಾಗೂ ಕೆ.ಆರ್.ನಗರದ ಸಿಪಿಐಗಳು, ಮೂವರು ಎಸ್‌.ಐಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.