ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಂಗೀತ, ನೃತ್ಯ ಹಾಗೂ ತಾಳವಾದ್ಯಗಳ ಲಿಖಿತ ಪರೀಕ್ಷೆಯು ಭಾನುವಾರ ರಾಜ್ಯದ 22 ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು.
ಜೂನಿಯರ್, ಸೀನಿಯರ್, ವಿದ್ವತ್‌ಪೂರ್ವ ಹಾಗೂ ವಿದ್ವತ್ ಅಂತಿಮ ಪರೀಕ್ಷೆಗಳನ್ನು 12ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಬರೆದರು.
ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ 1,200 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. ನಗರದೊಂದಿಗೆ ನೆರೆಯ ಜಿಲ್ಲೆಗಳ ಅಭ್ಯರ್ಥಿಗಳೊಂದಿಗೆ ಪೋಷಕರೂ ಬಂದಿದ್ದರು. ಇದರಿಂದಾಗಿ, ಆವರಣ ಜನಸಂದಣಿಯಿಂದ ತುಂಬಿತ್ತು. ಪರೀಕ್ಷೆ ಮುಗಿಯುವವರೆಗೂ ಪೋಷಕರು ಮಕ್ಕಳಿಗಾಗಿ ಕಾದರು.
‘ಕಳೆದ ವರ್ಷ 17ಸಾವಿರ ಮಂದಿ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 14ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. ಜೂನಿಯರ್ ಪರೀಕ್ಷೆ ಬರೆದವರು ಎರಡೂವರೆ ವರ್ಷದ ನಂತರ ಸೀನಿಯರ್ ಪರೀಕ್ಷೆಗೆ ಹಾಜರಾಗಬೇಕು. ಹೀಗಾಗಿ ಈ ವರ್ಷ 12,200 ಮಂದಿ ಬಂದಿದ್ದರು. ಮುಂದಿನ ವರ್ಷ ಪರೀಕ್ಷೆ ತೆಗೆದುಕೊಳ್ಳವವರ ಸಂಖ್ಯೆ ಹೆಚ್ಚಾಗಲಿದೆ’ ಎಂದು ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು ನಗರದಲ್ಲಿ 4, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಉತ್ತರಕನ್ನಡದ ಶಿರಸಿ, ಹೊನ್ನಾವರ, ಮೈಸೂರು, ಬಾಗಲಕೋಟೆ, ಗದಗ, ದಾವಣಗೆರೆ, ಬಳ್ಳಾರಿ, ತುಮಕೂರು, ಚಿಕ್ಕಮಗಳೂರು, ಪುತ್ತೂರು, ಉಡುಪಿ, ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಹಾಸನ ಕೇಂದ್ರಗಳಲ್ಲಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಯಾವುದೇ ಸಮಸ್ಯೆಯಾಗಿಲ್ಲ’ ಎಂದು ಮಾಹಿತಿ ನೀಡಿದರು.
‘ಕರ್ನಾಟಿಕ್, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ, ವಾದ್ಯ ಸಂಗೀತ, ತಾಳವಾದ್ಯದ ಜೂನಿಯರ್ ಪರೀಕ್ಷೆ ತೆಗೆದುಕೊಂಡಿದ್ದವರಿಗೆ ಬೆಳಿಗ್ಗೆ ಹಾಗೂ ಸೀನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಅಭ್ಯರ್ಥಿಗಳಿಗೆ ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ನಡೆದವು’ ಎಂದರು.
‘ಸೀನಿಯರ್, ಜೂನಿಯರ್ ಪ್ರಾಯೋಗಿಕ ಪರೀಕ್ಷೆಯು ಬೆಂಗಳೂರು ನಗರದ ಕೇಂದ್ರಗಳಲ್ಲಿ ಮೇ 14ರಿಂದ 18ರವರೆಗೆ ಹಾಗೂ ರಾಜ್ಯದ ಇತರ ಕೇಂದ್ರಗಳಲ್ಲಿ ಮೇ 17 ಹಾಗೂ 18ರಂದು ನಡೆಯಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.