ADVERTISEMENT

ಜಿಪಂ ಮಾಜಿ ಅಧ್ಯಕ್ಷ ಬಲರಾಮ್ ಆತ್ಮಹತ್ಯೆ

ಮಾರ್ಚ್‌ 16ರಂದು ನಡೆದ ಮೈಮುಲ್‌ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಲರಾಮ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 18:48 IST
Last Updated 20 ಮಾರ್ಚ್ 2021, 18:48 IST
ಕೆ.ಸಿ.ಬಲರಾಮ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ತಿ.ನರಸೀಪುರ ತಾಲ್ಲೂಕಿನ ಕುಪ್ಯ ಗ್ರಾಮದಲ್ಲಿ ಶನಿವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಡೆದರು
ಕೆ.ಸಿ.ಬಲರಾಮ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ತಿ.ನರಸೀಪುರ ತಾಲ್ಲೂಕಿನ ಕುಪ್ಯ ಗ್ರಾಮದಲ್ಲಿ ಶನಿವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಡೆದರು   

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ (67) ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ಇವರ ಅಂತ್ಯಕ್ರಿಯೆ ಸಂಜೆ ನೆರವೇರಿತು.

ಮೈಸೂರಿನ ಗರ್ಗೇಶ್ವರಿ ಬಳಿಯ ಕುಪ್ಯ ಗ್ರಾಮದವರಾದ ಇವರು ಮೈಸೂರು ಹಾಲು ಒಕ್ಕೂಟದ (ಮೈಮುಲ್) ನಿರ್ದೇಶಕರೂ ಆಗಿದ್ದರು. ಮಾರ್ಚ್‌ 16ರಂದು ನಡೆದ ಮೈಮುಲ್‌ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ವಿಚಾರವಾಗಿ ಅವರು ಮನನೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ರಾಯಲ್‌ ಲಾಡ್ಜ್‌ನಲ್ಲಿ ಅವರು ಎರಡು ದಿನಗಳಿಂದ ತಂಗಿದ್ದರು. ಬೆಂಗಳೂರಿಗೆ ಬಂದಾಗ ಅವರು ಇದೇ ಲಾಡ್ಜ್‌ನಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಶುಕ್ರವಾರ ಬೆಳಿಗ್ಗೆವರೆಗೆ ಕೋಣೆಯಿಂದ ಹೊರಬಾರದ್ದನ್ನು ಗಮನಿಸಿದ್ದ ಲಾಡ್ಜ್‌ ಸಿಬ್ಬಂದಿ ಪೊಲೀಸರ ಸಹಾಯದಿಂದ ಬಾಗಿಲು ತೆಗೆಸಿದಾಗ ಅವರು ವಿಷ ಸೇವಿಸಿರುವುದು ಗೊತ್ತಾಗಿದೆ.

‘ಕೋಣೆಯಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಶನಿವಾರ ನಿಧನರಾದರು. ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಉಪ್ಪಾರ ಪೇಟೆ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ಸಂಬಂಧ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.