ಮೈಸೂರು: ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಮುದ್ರಾ’ ಯೋಜನೆ(ಪಿಎಂಎಂವೈ)ಯಡಿ ಜಿಲ್ಲೆಯಲ್ಲಿ 5.73 ಲಕ್ಷ ಫಲಾನುಭವಿಗಳು ವಿವಿಧ ಬ್ಯಾಂಕ್‌ಗಳಿಂದ ಆರ್ಥಿಕ ಸೌಲಭ್ಯ ಪಡೆದುಕೊಂಡಿದ್ದು, ಈವರೆಗೆ ಒಟ್ಟು ₹ 30.16 ಕೋಟಿವರೆಗೆ ಸಾಲ ನೀಡಲಾಗಿದೆ. 2015ರ ಏ.8ರಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಿದ್ದರು.
ಶೇ 20ರಷ್ಟು ಸಾಲವನ್ನು ಹೊಸ ಉದ್ಯಮಿಗಳು ಪಡೆದುಕೊಂಡಿದ್ದಾರೆ. ಶೇ 68ರಷ್ಟು ಸಾಲವನ್ನು ಮಹಿಳಾ ಉದ್ಯಮಿಗಳಿಗೆ ಮತ್ತು ಶೇ 50ರಷ್ಟು ಸಾಲವನ್ನು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗದವರಿಗೆ ನೀಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ಕಲ್ಪಿಸುವುದು ಯೋಜನೆಯ ಉದ್ದೇಶ.
ಶ್ಯೂರಿಟಿ ಇಲ್ಲದೇ: ಯಾವುದೇ ‘ಆಧಾರ’ (ಶ್ಯೂರಿಟಿ) ಇಲ್ಲದೇ ಸಾಲ ಪಡೆದುಕೊಳ್ಳಬಹುದಾದ ಯೋಜನೆ ಇದು. 3 ವಿಭಾಗಗಳಲ್ಲಿ ಸಾಲ ಕೊಡಲಾಗುತ್ತದೆ. ಶಿಶು (₹50 ಸಾವಿರದವರೆಗೆ), ಕಿಶೋರ್ (₹50,001ರಿಂದ ₹5 ಲಕ್ಷ) ಹಾಗೂ ತರುಣ್ (₹10 ಲಕ್ಷದವರೆಗೆ) ವಿಭಾಗದಲ್ಲಿ ಸಾಲ ನೀಡಲಾಗುತ್ತದೆ. ಈಚೆಗೆ ಘೋಷಿಸಲಾಗಿರುವ ‘ತರುಣ್ ಪ್ಲಸ್’ ವಿಭಾಗದಲ್ಲಿ ₹ 20ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು. ಈಗಾಗಲೇ ‘ಮುದ್ರಾ’ದಲ್ಲಿ ಸಾಲ ತೆಗೆದುಕೊಂಡು ಮರುಪಾವತಿಸಿದವರಿಗೆ ಇದು ಲಭ್ಯವಾಗುತ್ತದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮೂಲಗಳು ತಿಳಿಸಿವೆ.
‘ಜಿಲ್ಲೆಯಲ್ಲೂ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಕಿರಾಣಿ ಅಂಗಡಿಗಳು, ಸೇವಾ ಘಟಕಗಳು, ಉತ್ಪಾದನಾ ಘಟಕಗಳ ಸ್ಥಾಪನೆಗೆ ಹೆಚ್ಚಿನ ಸಾಲ ಪಡೆದಿದ್ದಾರೆ. ಎಲ್ಲವನ್ನೂ ಆನ್‌ಲೈನ್‌ನಲ್ಲೇ ನಿರ್ವಹಿಸಲಾಗುತ್ತದೆ. ಖಾತೆ ಇರುವ ಬ್ಯಾಂಕ್ ಶಾಖೆಯಲ್ಲೇ ಮಾಹಿತಿ ಪಡೆದುಕೊಳ್ಳಬಹುದು. ಶ್ಯೂರಿಟಿ ಬೇಕಾಗಿಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬ್ಯಾಂಕ್‌ಗಳು ನಿಯಮಾನುಸಾರ ಸಾಲ ಕೊಡುತ್ತಿವೆ. ಮರುಪಾವತಿ ಪ್ರಮಾಣವೂ ಹೆಚ್ಚಾಗುತ್ತಿದೆ’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ನಾಗೇಶ್ ವಿ.ಎನ್. ‘ಪ್ರಜಾವಾಣಿ’ಗೆ ತಿಳಿಸಿದರು.
ಏನಿದರ ಉದ್ದೇಶ?: ಕಾರ್ಪೊರೇಟ್ ಅಲ್ಲದ ಕೃಷಿಯೇತರ ಸಣ್ಣ ಹಾಗೂ ಅತಿಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವನ್ನು ಯೋಜನೆ ಕಲ್ಪಿಸುತ್ತದೆ. ತಯಾರಿಕೆ, ಸಂಸ್ಕರಣೆ, ಮಾರಾಟ, ವಿಂಗಡಣೆ, ಪ್ಯಾಂಕಿಂಗ್, ಸಾಗಣೆ, ಅಗ್ರೋ ಉದ್ಯಮ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಇದು ಮುದ್ರಾ ವರದಾನವಾಗಿದೆ. ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆ ಮೂಲಕ ಕೈಗೆಟುಕುವ ಬಡ್ಡಿ ದರದಲ್ಲಿ, ಹೆಚ್ಚುವರಿ ಭದ್ರತೆ (ಕೋಲಾಟರಲ್ ಸೆಕ್ಯೂರಿಟಿ) ಇಲ್ಲದೆ ಸೌಲಭ್ಯ ಪಡೆದುಕೊಳ್ಳಬಹುದು. ಉದ್ಯಮಿಗಳಾಗಿ, ಪರಿಶ್ರಮಕ್ಕೆ ತಕ್ಕಂತೆ ಆದಾಯ ಗಳಿಸಲು ಯೋಜನೆ ನೆರವಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.
ತರಬೇತಿ ಪಡೆದು: ‘ಮುದ್ರಾ’ದಲ್ಲಿ ಸಾಲ ಪಡೆದು ಉದ್ಯಮ ಆರಂಭಿಸಲು ಬಯಸುವವವರಿಗಾಗಿ ಮೈಸೂರಿನಲ್ಲಿ ತರಬೇತಿ ಪಡೆಯಲು ಹಲವು ಸಂಸ್ಥೆಗಳಲ್ಲಿ ಅವಕಾಶವಿದೆ. ಸಿಡಾಕ್, ರುಡ್‌ಸೆಟ್, ಜೆಎಸ್‌ಎಸ್, ಒಡಿಪಿ ಮೊದಲಾದ ಸಂಸ್ಥೆಗಳಲ್ಲಿ ಕೌಶಲ ಹಾಗೂ ಇಡಿಪಿ ತರಬೇತಿ ಪಡೆದುಕೊಳ್ಳಬಹುದು. ಕೋಳಿ, ಕುರಿ ಸಾಕಣೆ, ಮಶ್ರೂಮ್ ಬೆಳೆ, ಮೆಕ್ಯಾನಿಕ್, ಡಿಟಿಪಿ, ಹೊಲಿಗೆ, ಕಾಂಡಿಮೆಂಟ್ಸ್, ಜೂಟ್ ಬ್ಯಾಗ್, ಮೊಬೈಲ್ ರಿಪೇರಿ ಬಗ್ಗೆ ತರಬೇತಿ ಪಡೆಯಬಹುದು.
‘ಯೋಜನೆಯಡಿ ದೊರೆಯುವ ಆರ್ಥಿಕ ಸೌಲಭ್ಯವನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಇದನ್ನು ಬೆಳವಣಿಗೆಗೆ ಏಣಿಯನ್ನಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ’ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾಗೇಶ್.
‘ಬ್ಯಾಂಕ್‌ಗಳಿಂದ ಸಾಲ ಪಡೆದುಕೊಳ್ಳುವುದು ತ್ರಾಸದಾಯಕ. ಅದಕ್ಕೆ ಮುದ್ರಾ ಯೋಜನೆಯೂ ಹೊರತಾಗಿಲ್ಲ. ತಿರಸ್ಕೃತ ಅರ್ಜಿಗಳೇ ಹೆಚ್ಚಿವೆ’ ಎಂಬ ಮಾತುಗಳೂ ಇವೆ.
‘ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು. ಫಲಾನುಭವಿಗಳು ಮತ್ತು ತಿರಸ್ಕೃತ ಅರ್ಜಿದಾರರ ಮಾಹಿತಿ ಪಾರದರ್ಶಕವಾಗಿ ಎಲ್ಲ ಬ್ಯಾಂಕ್‌ನವರೂ ಪ್ರಕಟಿಸಬೇಕು. ಅಲೆದಾಡಿಸಬಾರದು. ಸಾಲ ಪಡೆದವರು ಸದ್ಬಳಕೆ ಮಾಡಿಕೊಂಡು ಮರುಪಾವತಿಸಬೇಕು’ ಎನ್ನುತ್ತಾರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.