ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರೆವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಎಂಟು ಬಾರಿ ಹೊತ್ತಿದ್ದ ‘ಅರ್ಜುನ’ ಆನೆಯ ಸ್ಮಾರಕ ಸಿದ್ಧಗೊಂಡಿದೆ.
ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಬರುವ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕ್ಯಾಂಪ್‌ನಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಪ್ರತಿಕೃತಿ ಸ್ಥಾಪಿಸಲಾಗಿದ್ದು, ಮುಂದಿನ ತಿಂಗಳು ಅನಾವರಣಗೊಳ್ಳುವ ನಿರೀಕ್ಷೆ ಇದೆ.
ಜಿಲ್ಲೆಯೊಂದಿಗೆ ವಿವಿಧ ಜಿಲ್ಲೆಗಳಲ್ಲಿ ನಡೆದ ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದ ಸಾಕಾನೆಯೇ ‘ಅರ್ಜುನ’. ಅದೇ ಕಾರ್ಯದಲ್ಲಿ ತೊಡಗಿದ್ದಾಗಲೇ ಹೋರಾಡುತ್ತಾ ವಿರೋಚಿತ ಸಾವು ಕಂಡ ಆ ಆನೆಯು, ‘ಬಲಶಾಲಿ’, ‘ಮಾಸ್ಟರ್’ ಹಾಗೂ ‘ಹಿರಿಯ’ ಎಂದೆಲ್ಲಾ ಪ್ರೀತಿ ಗಳಿಸಿತ್ತು.
ಈ ಆನೆಯನ್ನು 1968ರಲ್ಲಿ ‘ಖೆಡ್ಡಾ’ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 22 ವರ್ಷಗಳಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. 2012ರಿಂದ 2019ರವರೆಗೆ, ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ (ವಿಜಯದಶಮಿ ಮೆರವಣಿಗೆ)ಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸಿ ಸೈ ಎನಿಸಿಕೊಂಡಿತ್ತು. ಆನೆ ಪ್ರಿಯರ ಪ್ರೀತಿಗೆ ಪಾತ್ರವಾಗಿತ್ತು.
ಬಳ್ಳೆ ಶಿಬಿರದಲ್ಲಿದ್ದರಿಂದ: 65 ವರ್ಷದ ‘ಅರ್ಜುನ’ ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿತ್ತು. 60 ವರ್ಷ ವಯಸ್ಸು ದಾಟಿದ ನಂತರ, ಚಿನ್ನದ ಅಂಬಾರಿ ಹೊರುವ ಕೆಲಸದಿಂದ ನಿವೃತ್ತಿ ನೀಡಲಾಗಿತ್ತು. 5,800 ಕೆ.ಜಿ. ತೂಕದ ಈ ಆನೆಯನ್ನು ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು.
‘ವಿಧಾನಮಂಡಲ ಅಧಿವೇಶನ ಮುಗಿದ ನಂತರ, ಏಪ್ರಿಲ್ ಮೊದಲ ವಾರದಲ್ಲಿ ಪ್ರತಿಕೃತಿ ಅನಾವರಣ ಕಾರ್ಯಕ್ರಮ ಆಯೋಜಿಸಲಾಗುವುದು. ಆ ಆನೆಯು ಎಷ್ಟು ಎತ್ತರ, ಉದ್ದ ಹಾಗೂ ಅಗಲ ಇತ್ತೋ ಅಷ್ಟೇ ಪ್ರಮಾಣದಲ್ಲಿ ಕಲಾವಿದರಿಂದ ಪ್ರತಿಕೃತಿಯನ್ನು ಮಾಡಿಸಲಾಗಿದೆ. ಆಕರ್ಷಕವಾಗಿ ಮೂಡಿಬಂದಿದೆ. ಆನೆ, ವನ್ಯಪ್ರಾಣಿ ಹಾಗೂ ಪರಿಸರಪ್ರಿಯರಿಗೆ ಅದು ಇಷ್ಟವಾಗಲಿದೆ. ‘ಅರ್ಜುನ’ ನೆನಪು ಚಿರಸ್ಥಾಯಿಯಾಗಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷರೂ ಆಗಿರುವ ಎಚ್.ಡಿ.ಕೋಟೆಯ ಶಾಸಕ ಅನಿಲ್ ಚಿಕ್ಕಮಾದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾಲ್ಲೂಕಿನ ಹೆಮ್ಮೆ: ‘ಮುಖ್ಯ ರಸ್ತೆಯ ಬದಿಯಲ್ಲೇ ಪ್ರತಿಕೃತಿ ಇದೆ. ಸಫಾರಿಗೆ ಬರುವವರೊಂದಿಗೆ ಆ ದಾರಿಯಲ್ಲಿ ಸಾಗುವವರೆಲ್ಲರೂ ಅರ್ಜುನನ್ನು ನೋಡಬಹುದು. ಜನರಿಗಾಗಿ ಇದನ್ನು ಮಾಡಿದ್ದೇವೆ. ₹14ಲಕ್ಷದಿಂದ ₹15 ಲಕ್ಷ ವೆಚ್ಚವಾಗಿದೆ. ಆ ಆನೆಯು ಮಾಡಿದ್ದ ಸಾಹಸಗಾಥೆಗಳನ್ನು ತಿಳಿಸಿಕೊಡುವುದು ನಮ್ಮ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.
‘ಅರ್ಜುನ’ ಆನೆ ನಮ್ಮ ಎಚ್.ಡಿ.ಕೋಟೆ ತಾಲ್ಲೂಕಿನ ಹೆಮ್ಮೆ. ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ‘ಅಂಬಾರಿ’ಯನ್ನು ಹೊತ್ತು ಪ್ರವಾಸಿಗರೊಂದಿಗೆ ಜನರ ಪ್ರೀತಿ ಗಳಿಸಿತ್ತು. ಆನೆಗಳನ್ನು ಪಳಗಿಸುವುದು ಸೇರಿದಂತೆ ವಿವಿಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶಿಸಿತ್ತು. ಹಾಸನ ಜಿಲ್ಲೆಯ ದಬ್ಬಳ್ಳಿಕಟ್ಟೆ ಮೀಸಲು ಅರಣ್ಯದಲ್ಲಿ 2023ರ ಡಿ.4ರಂದು ಪುಂಡಾನೆ ಸೆರೆ ಕಾರ್ಯಾಚರಣೆಯೇ ಮೃತಪಟ್ಟಿತ್ತು. ಕಳೇಬರವನ್ನು ಅಲ್ಲಿಂದ ತರಿಸಿ ಬಳ್ಳೆಯಲ್ಲೇ ಸಮಾಧಿ ಮಾಡಬೇಕು ಎಂಬ ಉದ್ದೇಶ ನನ್ನದಾಗಿತ್ತು. ಆದರೆ, ಅದನ್ನು ಸಾಗಿಸುವುದು ಕಷ್ಟಸಾಧ್ಯ ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಆಗಲಿಲ್ಲ’ ಎಂದರು.
‘ಪ್ರತಿಕೃತಿ ಮೊದಲಾದವುಗಳ ನಿರ್ಮಾಣ ಕಾರ್ಯ ಸೆಪ್ಟೆಂಬರ್‌ನಿಂದ ನಡೆದಿತ್ತು. ಪ್ರತಿಕೃತಿಯಲ್ಲಿ ಅರ್ಜುನ ಮೈದಳೆದಿದ್ದಾನೆ. ದಂತ, ಸೊಂಡಿಲು, ಬಾಲ ಸೇರಿದಂತೆ ಅರ್ಜುನ ಹೇಗಿದ್ದನೋ ಅದೇ ರೀತಿಯಲ್ಲಿ ಮಾಡಿಸಲಾಗಿದೆ. ಸುತ್ತಲೂ ಗ್ರಿಲ್ ಹಾಕಲಾಗಿದೆ. ಸದ್ಯ ಪ್ರತಿಕೃತಿಯನ್ನು ಮುಚ್ಚಲಾಗಿದೆ. ಅಧಿಕೃತವಾಗಿ ಅನಾವರಣಗೊಂಡ ನಂತರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳಲಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಕಾಳಜಿ ಸ್ಪಂದಿಸಿದ ಸಿಎಂ, ಅರಣ್ಯ ಸಚಿವ ವನ್ಯಪ್ರಿಯರ ಆಕರ್ಷಿಸಲಿರುವ ಪ್ರತಿಕೃತಿ
ಅರ್ಜುನ ಆನೆಯ ಸವಿನೆನಪು ಹಸಿರುಗೊಳಿಸಲೆಂದು ಪ್ರತಿಕೃತಿ ನಿರ್ಮಾಣಕ್ಕೆ ಕೋರಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ಪಂದಿಸಿದ್ದರಿಂದ ಸಾಧ್ಯವಾಗಿದೆ.ಅನಿಲ್ ಚಿಕ್ಕಮಾದು ಶಾಸಕ ಎಚ್.ಡಿ.ಕೋಟೆ
ಮೈಸೂರು ನಗರದಲ್ಲೂ ಸ್ಥಾಪನೆ ಆಗುವುದೇ ಸ್ಮಾರಕ? ‘ಮೈಸೂರಿನ ಪಾರಂಪರಿಕತೆಗೆ ತಕ್ಕಂತೆ ಎಲ್ಐಸಿ ವೃತ್ತದ ಬಳಿ ‘ಅರ್ಜುನ’ ಸ್ಮಾರಕ ನಿರ್ಮಿಸಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಸಲ್ಲಿಸಿರುವುದು ನಗರದಲ್ಲೂ ಒಂದು ಸ್ಮಾರಕ ನಿರ್ಮಾಣದ ಕನಸು ಚಿಗುರೊಡೆಯುವಂತೆ ಮಾಡಿದೆ. ‘ಮೈಸೂರು ಮತ್ತು ದಸರಾ ಆನೆಗಳ ನಡುವೆ ಭಾವನಾತ್ಮಕ ಸಂಬಂಧವಿದೆ. ಎಲ್ಲರ ಮನಸೆಳೆದಿದ್ದ ಅರ್ಜುನ ಆನೆ ದುರಾದೃಷ್ಟವಶಾತ್ ನಮ್ಮನ್ನು ಅಗಲಿದೆ. ಹಲವು ವರ್ಷ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಗಾಂಭೀರ್ಯದಿಂದ ಸಾಗಿದ ಈ ಗಜ ನೆನಪಿನಲ್ಲಿ ಸ್ಮಾರಕ ನಿರ್ಮಿಸುವುದು ಸೂಕ್ತ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಕೋರಿದ್ದೇನೆ’ ಎಂದು ಸಂಸದರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.