ADVERTISEMENT

ಸಿಇಟಿ: ಜೀವವಿಜ್ಞಾನ ಪರೀಕ್ಷೆಗೆ 2,184 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 6:58 IST
Last Updated 16 ಜೂನ್ 2022, 6:58 IST
   

ಮೈಸೂರು: ವಿವಿಧ ವೃತ್ತಿಪ‍ರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಇಟಿ) ನಗರದ 26 ಕೇಂದ್ರಗಳಲ್ಲಿ ಗುರುವಾರ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಜೀವ ವಿಜ್ಞಾನ ಪರೀಕ್ಷೆ ಬರೆದರು.

ಬೆಳಿಗ್ಗೆ ನಡೆದ ಪರೀಕ್ಷೆಗೆ ಒಟ್ಟು 11,565 ವಿದ್ಯಾರ್ಥಿಗಳ ಪೈಕಿ, 2,184 ವಿದ್ಯಾರ್ಥಿಗಳು ಗೈರಾಗಿದ್ದರು. 9381 ಮಂದಿ ಪರೀಕ್ಷೆ ಬರೆದರು.

ಕಡ್ಡಾಯವಾಗಿ ಸರ್ಜಿಕಲ್‌ ಮಾಸ್ಕ್ ಧರಿಸಿ ಬರುವಂತೆ ಸೂಚಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜ್ವರ, ಶೀತ ಇರುವ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರದಲ್ಲೂ ಪ್ರತ್ಯೇಕ ಕೊಠಡಿ ಮೀಸಲಿರಿಸಲಾಗಿತ್ತು.

ADVERTISEMENT

ಕೇಂದ್ರಗಳು: ಎಲ್ಲ 26 ಪರೀಕ್ಷಾ ಕೇಂದ್ರಗಳು ನಗರದಲ್ಲಿಯೇ ಇವೆ. ಒಂಟಿಕೊ‍ಪ್ಪಲು, ಕುವೆಂಪುನಗರ, ಮಂಚೇಗೌಡನ ಕೊಪ್ಪಲು ಹಾಗೂ ಪೀಪಲ್ಸ್‌ಪಾರ್ಕ್‌ನ ಸರ್ಕಾರಿ ಪಿಯು ಕಾಲೇಜುಗಳು. ಗೋಪಾಲಸ್ವಾಮಿ, ಎಸ್‌ಡಿಎಂ, ಮಹಾಜನ, ಸಂತ ಫಿಲೋಮಿನಾ, ಮರಿಮಲ್ಲಪ್ಪ, ಟೆರಿಷಿಯನ್‌, ಮಹಾರಾಣಿ, ಮಾತೃಮಂಡಳಿ, ಕಾವೇರಿ, ವಿವೇಕಾನಂದ, ಸದ್ವಿದ್ಯಾ, ರಾಘವೇಂದ್ರ ಗುರುಕುಲ, ವಿಜಯವಿಠ್ಠಲ, ಆದಿಚುಂಚನಗಿರಿ, ಡಿ.ಬನುಮಯ್ಯ, ಸರ್ಕಾರಿ ವಿಭಜಿತ ಮಹಾರಾಜ, ಸರಸ್ವತಿಪುರಂ, ಊಟಿ ರಸ್ತೆ, ಜೆ.ಪಿ.ನಗರದ ಜೆಎಸ್‌ಎಸ್‌ ಪಿಯು ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.