ಮೈಸೂರು: ಜಿಲ್ಲಾ ಪೊಲೀಸರು ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಶುಕ್ರವಾರ ಹತ್ತುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ನೇತೃತ್ವದಲ್ಲಿ ಸುಮಾರು 200ಕ್ಕೂ ಅಧಿಕ ಪೊಲೀಸರು ಚಾಮುಂಡಿಬೆಟ್ಟದ ಸಾವಿರ ಮೆಟ್ಟಲನ್ನು ಹತ್ತಿದರು.
ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ರಿಷ್ಯಂತ್, 'ಪೊಲೀಸರ ಕೆಲಸದ ಏಕತಾನತೆ ಮುರಿಯಲು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಹುತೇಕ ಮಂದಿ ಪೊಲೀಸರು ಅತ್ಯುತ್ಸಾಹದಿಂದ ಬೆಟ್ಟ ಹತ್ತಿದ್ದಾರೆ. ಒತ್ತಡದಿಂದ ಮುಕ್ತರಾಗಲು ಈ ಬಗೆಯ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು' ಎಂದು ತಿಳಿಸಿದರು.
ಪೊಲೀಸರಲ್ಲಿ ಹಲವು ಮಂದಿ ಸುಸ್ತಾಗಿ ಅಲ್ಲಲ್ಲಿ ವಿಶ್ರಮಿಸಿಕೊಂಡು ಬೆಟ್ಟ ಹತ್ತಿದರು. ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿತ್ತು. 9 ಮಂದಿಯ ತಂಡವನ್ನಾಗಿ ವಿಭಜಿಸಿಕೊಂಡು ಬೆಟ್ಟ ಹತ್ತಲಾಯಿತು. ಬೆಳಿಗ್ಗೆ 6.30ಕ್ಕೆ ಆರಂಭವಾದ ಚಾರಣ 7.45ಕ್ಕೆ ಮುಕ್ತಾಯಗೊಂಡಿತು. ತಮ್ಮ ಸಿಬ್ಬಂದಿಯೊಂದಿಗೆ ಅತಿಥಿ ಗೃಹದಲ್ಲಿ ಉಪಾಹಾರ ಸೇವಿಸಿದ ರಿಷ್ಯಂತ್ ಅವರುಅಹವಾಲು ಆಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.