ಮೈಸೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳ ಪರಿಣಾಮ ಜಿಲ್ಲೆಯಲ್ಲಿ ಹಿಪ್ಪುನೇರಳೆ (ರೇಷ್ಮೆ) ಕೃಷಿ ಬೆಳಗುತ್ತಿದೆ. ರೇಷ್ಮೆಗೂಡಿಗೆ ಒಳ್ಳೆಯ ಬೆಲೆಯೂ ಸಿಗುತ್ತಿರುವುದು ಕೃಷಿಕರನ್ನು ಈ ಬೇಸಾಯದತ್ತ ಸೆಳೆಯುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರ ತವರು ಜಿಲ್ಲೆಯಾದ ಇಲ್ಲಿ ಚದುರಿದಂತೆ ಈ ಕೃಷಿ ನಡೆಯುತ್ತಿದೆ. ತಿ.ನರಸೀಪುರ, ಎಚ್.ಡಿ. ಕೋಟೆ, ಮೈಸೂರು ತಾಲ್ಲೂಕಿನಲ್ಲಿ ಜಾಸ್ತಿ ಪ್ರಮಾಣದಲ್ಲಿದೆ. ಪ್ರಸ್ತುತ 2,500 ಹೆಕ್ಟೇರ್‌ನಲ್ಲಿದ್ದು, ರೇಷ್ಮೆಗೂಡುಗಳ ಉತ್ಪಾದನೆ ಹೆಚ್ಚಾಗುತ್ತಿದೆ.
ಕೆಲವು ವರ್ಷದಿಂದ ಇಲಾಖೆಯಿಂದ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಗಳು ಫಲ ನೀಡಿವೆ. ಶೇ 90ರಷ್ಟು ಮಂದಿ ದ್ವಿತಳಿ ಗೂಡುಗಳನ್ನೇ ಉತ್ಪಾದಿಸುತ್ತಿದ್ದಾರೆ. ಇಲ್ಲಿಂದ ಗೂಡುಗಳನ್ನು ರಾಮನಗರಕ್ಕೂ ಕಳುಹಿಸಲಾಗುತ್ತಿದೆ. ಇಲ್ಲಿನ ಎಪಿಎಂಸಿಯಲ್ಲಿರುವ ರೇಷ್ಮೆ ಮಾರುಕಟ್ಟೆಗೂ ‘ಗೂಡು’ ಬರುತ್ತಿದೆ. ಬಿಳಿಗೂಡು (ದ್ವಿತಳಿ) ಇಲ್ಲಿನ ಮಾರುಕಟ್ಟೆಗೆ, ಹಳದಿ ಗೂಡು ಕೊಳ್ಳೇಗಾಲದ ಮಾರುಕಟ್ಟೆಗೆ ಹೋಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರತಿ ವರ್ಷಕ್ಕೆ ಸರಾಸರಿ 175ರಿಂದ 200 ಹೆಕ್ಟೇರ್ ವಿಸ್ತರಣೆಯ ಗುರಿಯನ್ನು ಕೊಡಲಾಗುತ್ತಿದೆ. ಅದರಲ್ಲಿ ಶೇ 90ರಷ್ಟು ಗುರಿ ಸಾಧನೆ ಆಗುತ್ತಿದೆ. ಕೆಲವೊಮ್ಮೆ ಗುರಿ ಮೀರುತ್ತಿದೆ.
ಪ್ರೋತ್ಸಾಹಧನ: ಇಲಾಖೆಯಿಂದ ಹೋದ ವರ್ಷದಿಂದ ದ್ವಿತಳಿ ಗೂಡು ಪ್ರತಿ ಕೆ.ಜಿ.ಗೆ ₹30 ಪ್ರೋತ್ಸಾಹಧನ ಕೊಡಲಾಗುತ್ತಿದೆ. ಚಾಕಿ ವೆಚ್ಚವಾಗಿ ಪ್ರತಿ ನೂರು ಮೊಟ್ಟೆಗೆ ₹1 ಸಾವಿರದಂತೆ ಒದಗಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಕಾರ್ಯಕ್ರಮದಲ್ಲಿ ಸೋಂಕು ನಿವಾರಕವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕ್ರಮವಾಗಿ ಚಾಕಿ ವೆಚ್ಚವಾಗಿ ₹34 ಲಕ್ಷ ಹಾಗೂ ಪ್ರೋತ್ಸಾಹಧನವಾಗಿ ₹31 ಲಕ್ಷ ಕೊಡಲಾಗಿದೆ.
ಒಂದು ವರ್ಷದಲ್ಲಿ ರೇಷ್ಮೆ ಸಾಕಾಣಿಕೆ ಮನೆ ನಿರ್ಮಾಣಕ್ಕೆಂದೇ ₹82.18 ಲಕ್ಷವನ್ನು ರಾಜ್ಯ ಸರ್ಕಾರದಿಂದ ಹಾಗೂ ₹1.64 ಕೋಟಿಯನ್ನು ಸಹಾಯಧನವಾಗಿ ಕೇಂದ್ರದಿಂದ ನೀಡಲಾಗಿದೆ (ಶೇ 25 ರಾಜ್ಯ ಹಾಗೂ ಶೇ 50ರಷ್ಟು ಕೇಂದ್ರದಿಂದ). ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟರಿಗೆ ₹19.26 ಲಕ್ಷ ಒದಗಿಸಲಾಗಿದೆ.
ಪ್ರತ್ಯೇಕ ಮನೆ: ‘ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರು ಪ್ರತ್ಯೇಕವಾದ ರೇಷ್ಮೆ ಸಾಕಾಣಿಕೆ ಮನೆಯನ್ನೇ ಮಾಡುತ್ತಿದ್ದಾರೆ. ಅದಕ್ಕಾಗಿ ಇಲಾಖೆಯಿಂದ ಸಾಮಾನ್ಯ ವರ್ಗದವರಿಗೆ ₹3.50 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ₹4.12 ಲಕ್ಷ ಸಹಾಯಧನವನ್ನು ಕ್ರಮವಾಗಿ ಶೇ 75 ಹಾಗೂ ಶೇ 90ರಷ್ಟು ಕೊಡಲಾಗುತ್ತಿದೆ. ಘಟಕ ವೆಚ್ಚ ₹4.30 ಲಕ್ಷ ಇದೆ. ಸದ್ಯ ಜಿಲ್ಲೆಯಲ್ಲಿ 5,200 ಬೆಳೆಗಾರರಿದ್ದಾರೆ. ಕಳೆದ ವರ್ಷ 300 ಮಂದಿ ಸೇರ್ಪಡೆಯಾಗಿದ್ದಾರೆ’ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಖಾತ್ರಿ’ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಲು ಅರ್ಹರಲ್ಲದವರಿಗೆ ಜಿಲ್ಲಾ ಪಂಚಾಯಿತಿಯಿಂದ ಸಸಿಗೆ ₹6.80 ಸಹಾಯಧನವನ್ನು (ನೆಡಲು) ಒದಗಿಸಲಾಗುತ್ತಿದೆ. ಉಪಕರಣಗಳ ವಿತರಣೆಗೆ ರಾಜ್ಯದಿಂದ ₹48.22 ಲಕ್ಷ ಹಾಗೂ ಕೇಂದ್ರದಿಂದ ₹ 92 ಲಕ್ಷ ಒದಗಿಸಲಾಗಿದೆ. ಎಲೆಕ್ಟ್ರಿಕ್ ಸ್ಪ್ರೇಯರ್, ಪೆಟ್ರೋಲ್ ಸ್ಪ್ರೇಯರ್ ಹಾಗೂ ಪ್ಲಾಸ್ಟಿಕ್ ಚಂದ್ರಿಕೆಗಳನ್ನು ವಿತರಿಸಲಾಗುತ್ತಿದೆ. ಸಕಾಲದಲ್ಲಿ ಸಹಾಯಧನ ಕೊಟ್ಟು ಪ್ರೋತ್ಸಾಹಿಸಲಾಗುತ್ತಿದೆ’ ಎಂದು ರಾಚಪ್ಪ ತಿಳಿಸಿದರು.
‘ಹಿಂದೆ ಪ್ರದೇಶ ಜಾಸ್ತಿ ಇದ್ದರೂ ಉತ್ಪಾದನೆ ಹಾಗೂ ತಂತ್ರಜ್ಞಾನ ಬಳಕೆ ಕಡಿಮೆ ಇತ್ತು. ಈಗ ಆಧುನಿಕ ಪದ್ಧತಿ ಮೂಲಕ ಉತ್ಪಾದನೆ ಹಾಗೂ ಗುಣಮಟ್ಟವೂ ಜಾಸ್ತಿಯಾಗಿದೆ. ಕೇಂದ್ರೀಯ ರೇಷ್ಮೆ ಸಂಶೋಧನಾ ಸಂಸ್ಥೆ (ಸಿಎಸ್‌ಆರ್‌ಟಿಐ) ಮೂಲಕ ಕ್ಷೇತ್ರಕ್ಕೇ ಹೋಗಿ ತರಬೇತಿ ನೀಡಲಾಗುತ್ತಿದೆ. ಕ್ಷೇತ್ರೋತ್ಸವ, ವಸ್ತುಪ್ರದರ್ಶನ ಆಯೋಜಿಸಿ ತಾಂತ್ರಿಕತೆ ಪರಿಚಯಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿದ್ದಾರೆ 5,200 ಬೆಳೆಗಾರರು ಹೆಚ್ಚುತ್ತಿರುವ ರೇಷ್ಮೆ ಗೂಡಿನ ಉತ್ಪಾದನೆ ಬೆಳೆಗಾರರು ಬೇಡಿಕೆ ಆಧರಿಸಿ ಹೊಸ ಮಾರುಕಟ್ಟೆ ನಿರ್ಮಾಣ
ಎಚ್.ಡಿ.ಕೋಟೆ ನಂಜನಗೂಡು ಮೊದಲಾದ ಕಡೆಗಳಲ್ಲಿ ಕೆಲ ಸಾಫ್ಟ್‌ವೇರ್ ಎಂಜಿನಿಯರ್‌ಗಳು ವರ್ಕ್‌ಫ್ರಂ ಹೋಂ ಜೊತೆಗೆ ರೇಷ್ಮೆ ಕೃಷಿ ಮಾಡುತ್ತಿದ್ದಾರೆ -ರಾಚಪ್ಪ ಉಪ ನಿರ್ದೇಶಕ ರೇಷ್ಮೆ ಇಲಾಖೆ
ಹಿಂದೆ ತಂಬಾಕು ಹಾಕಿದ್ದೆ. ಇದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿರುವುದನ್ನು ಮನಗಂಡು ಸರ್ಕಾರದ ಸಹಾಯ ಪಡೆದು ರೇಷ್ಮೆ ಕೃಷಿ ಮಾಡುತ್ತಿರುವೆ-ಎಚ್.ಎಸ್. ಬಸವರಾಜು ರೈತ ಹಿಟ್ನೆಹೆಬ್ಬಾಗಿಲು ಪಿರಿಯಾಪಟ್ಟಣ ತಾಲ್ಲೂಕು
20 ಕೋಟಿ ವೆಚ್ಚದಲ್ಲಿ ಹೊಸ ಮಾರುಕಟ್ಟೆ ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ಮೈಸೂರಿನಲ್ಲಿರೇಷ್ಮೆಗೂಡಿನ ಮಾರುಕಟ್ಟೆಯನ್ನು ನಬಾರ್ಡ್ (ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ಸಹಯೋಗದಲ್ಲಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಒಟ್ಟು ₹20 ಕೋಟಿ ಯೋಜನೆ ಇದಾಗಿದ್ದು ಮೊದಲ ಕಂತಿನಲ್ಲಿ ₹5 ಕೋಟಿ ಹಂಚಿಕೆಯಾಗಿದೆ. ಮೈಸೂರು ತಾಲ್ಲೂಕಿನ ಹೊಸಹುಂಡಿ ಬಳಿ 2 ಎಕರೆ ಜಮೀನು ದೊರೆತಿದೆ. ಅಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪ್ರಸ್ತುತ ಎಪಿಎಂಸಿಯ ತಾತ್ಕಾಲಿಕ ಕೊಠಡಿಯಲ್ಲಿ ಮಾರುಕಟ್ಟೆ ನಡೆಸಲಾಗುತ್ತಿದೆ. ರೇಷ್ಮೆ ಬೆಳೆಗಾರರು ಬೇಡಿಕೆ ಆಧರಿಸಿ ಹೊಸದಾಗಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ರೆಂಬೆ ಹುಳು ಸಾಕಣೆ ಇತ್ತೀಚಿನ ವರ್ಷಗಳಲ್ಲಿ ಬಿದಿರಿನ ಚಂದ್ರಿಕೆಗಳ ಬಳಕೆ ಕಡಿಮೆಯಾಗಿದ್ದು ಪ್ಲಾಸ್ಟಿಕ್ ಚಂದ್ರಿಕೆಗಳನ್ನೇ ಕೊಡಲಾಗುತ್ತಿದೆ. ರೆಂಬೆ ಹುಳು ಸಾಕಣೆಯಂತಹ ಆಧುನಿಕ ಪದ್ಧತಿಯಲ್ಲಿ ಬೇಸಾಯ ಮಾಡಲಾಗುತ್ತಿದೆ. ರೇಷ್ಮೆಹುಳು ರೆಕ್ಕೆ ಬೆಳೆದಾಗಲೇ (40–45 ದಿನಕ್ಕೆ) ರೆಂಬೆಗಳನ್ನು ಕತ್ತರಿಸಿ ರ‍್ಯಾಕ್ ಮೇಲೆ ಹಾಕಲಾಗುತ್ತದೆ. ಇದರಿಂದ ಹುಳುಗಳಿಗೆ ತಾಜಾ ಹಿಪ್ಪುನೇರಳೆ ಸೊಪ್ಪು ಕೊಟ್ಟಂತಾಗುತ್ತದೆ. ಎಲೆಗಳನ್ನು ಕಿತ್ತು ಹಾಕುವುದು ಕಡಿಮೆಯಾಗಿದೆ. ತಟ್ಟೆ ಪದ್ಧತಿಯೂ ಶೇ 99ರಷ್ಟು ಇಲ್ಲವಾಗಿದೆ. ದಿನಕ್ಕೆ ಹಲವು ಬಾರಿ ಸೊಪ್ಪು ಕೊಡುವುದೂ ತಪ್ಪುತ್ತಿದೆ ಎನ್ನುತ್ತಾರೆ ರಾಚಪ್ಪ.
ಉದ್ಯೋಗ ಖಾತ್ರಿಯಲ್ಲಿ...
ರೇಷ್ಮೆ ಕೃಷಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ–ನರೇಗಾ) ಯೋಜನೆಯೂ ಬಲ ತುಂಬುತ್ತಿದೆ. ಆ ಯೋಜನೆಯಲ್ಲಿ ಕೂಲಿಗೆ ಅವಕಾಶವಿದೆ. ಸಸಿ ನಾಟಿಗೆ ಕೂಲಿ ಹಾಗೂ ಸಾಮಗ್ರಿ ವೆಚ್ಚ ಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.