ADVERTISEMENT

ಮೈಸೂರು | ‘ಕೋಟಿಗಾನಹಳ್ಳಿ ಕಥನ’ ನಾಟಕೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:13 IST
Last Updated 10 ಮೇ 2025, 16:13 IST
ರಂಗಾಯಣದ ವನರಂಗದಲ್ಲಿ ‘ಕೋಟಿಗಾನಹಳ್ಳಿ ಕಥನ’ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮಕ್ಕಳು–ಪೋಷಕರು – ಪ್ರಜಾವಾಣಿ ಚಿತ್ರ
ರಂಗಾಯಣದ ವನರಂಗದಲ್ಲಿ ‘ಕೋಟಿಗಾನಹಳ್ಳಿ ಕಥನ’ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮಕ್ಕಳು–ಪೋಷಕರು – ಪ್ರಜಾವಾಣಿ ಚಿತ್ರ   

ಮೈಸೂರು: ‘ಢರ್ ಢರ್ ಬುಡ್ಡಣ್ಣ’ ಹಾಗೂ ‘ಕಾಗೆ ಕಣ್ಣು ಮತ್ತು ಇರುವೆ ಬಲ’ ನಾಟಕಗಳ ಪ್ರದರ್ಶನದ ಮೂಲಕ ‘ಕೋಟಿಗಾನಹಳ್ಳಿ ಕಥನ’ ಮಕ್ಕಳ ನಾಟಕೋತ್ಸವಕ್ಕೆ ಶನಿವಾರ ಸಂಭ್ರಮದ ತೆರೆ ಬಿದ್ದಿತು. ನಾಟಕೋತ್ಸವದ ಯಶಸ್ಸಿಗೆ ಶ್ರಮಿಸಿದವರನ್ನು ಅಭಿನಂದಿಸಲಾಯಿತು.

ರಂಗಾಯಣದಲ್ಲಿ ನಡೆದಿರುವ ಚಿಣ್ಣರ ಮೇಳ ಬೇಸಿಗೆ ಶಿಬಿರದ ಅಂಗವಾಗಿ ‘ವನರಂಗ’ದಲ್ಲಿ ಆಯೋಜಿಸಿದ್ದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರ ನಾಟಕಗಳ ಈ ಉತ್ಸವದಲ್ಲಿ ಶಿಬಿರದ ಮಕ್ಕಳು ಒಟ್ಟು 12 ನಾಟಕ ಪ್ರದರ್ಶನ ನೀಡಿದರು.

ಶನಿವಾರ ಸಂಜೆ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯಿತ್ರಿ ‘ಚಿಣ್ಣರ ಮೇಳದಂತಹ ಬೇಸಿಗೆ ಶಿಬಿರಗಳಿಂದ ಮಕ್ಕಳ ಶಾರೀರಿಕ, ದೈಹಿಕ ಬೆಳವಣಿಗೆ ಸಾಧ್ಯವಾಗಿದೆ. ಜ್ಞಾನ ವೃದ್ಧಿಯಾಗಿದೆ. ಕೋಟಿಗಾನಹಳ್ಳಿ ರಾಮಯ್ಯರ ಬರಹಗಳಲ್ಲಿನ ಸಾಮಾಜಿಕ ಕಳಕಳಿ ನಾಟಕಗಳ ಮೂಲಕ ಮಕ್ಕಳನ್ನು ತಲುಪಿದೆ’ ಎಂದರು.

ADVERTISEMENT

‘ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇಂತಹ ಶಿಬಿರಗಳು ಇನ್ನಷ್ಟು ನಡೆಯಲಿ. ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ‌ ಕಾಳಜಿ‌ ಬೆಳೆಯಲಿ’ ಎಂದು ಆಶಿಸಿದರು. ‌

ಲೇಖಕಿ ಪದ್ಮಾ ಶ್ರೀರಾಮ್‌ ಮಕ್ಕಳಿಗೆ ಪರಿಸರ ಕಾಳಜಿಯ ಮಹತ್ವ ವಿವರಿಸಿದರು. ‘ಸಸಿಗಳನ್ನು ನೆಟ್ಟು ಪೋಷಿಸಿ, ಸುತ್ತಲಿನ ಗಿಡಮರ, ಬಳ್ಳಿಗಳನ್ನು ಪ್ರೀತಿಸಿ ರಕ್ಷಿಸಿ’ ಎಂದು ಸಲಹೆ ನೀಡಿದರು.

ಸಮಾರೋಪ ನುಡಿಗಳನ್ನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ, ‘ಇಪ್ಪತ್ತೈದು ವರ್ಷದ ಹಿಂದೆ ಆರಂಭಗೊಂಡ ಮೇಳ ವರ್ಷದಿಂದ ವರ್ಷಕ್ಕೆ ಜನಪ್ರಿಯ ಆಗುತ್ತಿದೆ. ಮಕ್ಕಳಿಗೆ ಅಜ್ಜಿ ಮನೆ ಮರೀಚಿಕೆ ಆಗುತ್ತಿರುವ ಕಾಲದಲ್ಲಿ ಇಂತಹ ಶಿಬಿರ ಆಯೋಜನೆ ಶ್ಲಾಘನೀಯ’ ಎಂದರು.

ಲೇಖಕ ರಾಜಪ್ಪ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಚಿಣ್ಣರ ಮೇಳ ಶಿಬಿರದ ನಿರ್ದೇಶಕ ಅನಿಲ ರೇವೂರ್‌ ಮಾತನಾಡಿದರು. ಚಿಣ್ಣರ ಮೇಳದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾತಯಿತು.

ಭಾನುವಾರ ಮಕ್ಕಳ ಸಂತೆಯೊಂದಿಗೆ ಚಿಣ್ಣರ ಮೇಳವು ಸಮಾರೋ‍ಪಗೊಳ್ಳಲಿದೆ.

Highlights - ಉತ್ಸವದಲ್ಲಿ 12 ನಾಟಕ ಪ್ರದರ್ಶಿಸಿದ ಮಕ್ಕಳು ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ‌ ಕಾಳಜಿ‌ ಬೆಳೆಯಲಿ ಚಿಣ್ಣರ ಮೇಳ ಸಮಾರೋ‍ಪ ಇಂದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.