ADVERTISEMENT

‘ಮೈಸೂರು ನವೋದ್ಯಮ ಜಾತ್ರೆ’ ಆ.5ರಿಂದ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 12:24 IST
Last Updated 4 ಆಗಸ್ಟ್ 2022, 12:24 IST
   

ಮೈಸೂರು: ‘ಮೈಸೂರು ಸ್ಟಾರ್ಟ್‌–ಅಪ್‌ ‍ಪೆವಿಲಿಯನ್‌ (ಮೈಸೂರು ನವೋದ್ಯಮ ಜಾತ್ರೆ) ಹಾಗೂ ಸಮ್ಮೇಳನವನ್ನು ಆ.5ರಿಂದ 7ರವರೆಗೆ ನಗರದ ಶ್ರೀಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನ ಫುಟ್‌ಬಾಲ್‌ ಮೈದಾನದಲ್ಲಿ ಆಯೋಜಿಸಲಾಗಿದೆ’ ಎಸ್‌ಜೆಸಿಇ ಸ್ಟೆಪ್‌ ಸಿಇಒ ಶಿವಶಂಕರ್‌ ತಿಳಿಸಿದರು.

‘ಎಸ್‌ಜೆಸಿಇ–ಸ್ಟೆಪ್‌, ಟಿಐಇ ಮೈಸೂರು, ಯಂಗ್‌ ಇಂಡಿಯನ್ಸ್, ಸಿಐಐ, ಕರ್ನಾಟಕ ಡಿಜಿಟಲ್‌, ಸ್ಟಾರ್ಟ್‌ ಅಪ್‌ ಇಂಡಿಯಾ ಮತ್ತು ಸ್ಟಾರ್ಟ್‌ ಅಪ್‌ ಕರ್ನಾಟಕ ಹಾಗೂ ಸರ್ಕಾರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮೈಸೂರಿನಂತಹ 2ನೇ ಹಂತದ ನಗರಗಳಲ್ಲೂ ನವೋದ್ಯಮದ ಅಲೆಯು ಪಸರಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘ಆ.5ರಂದು ಬೆಳಿಗ್ಗೆ 10.05ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮೈಸೂರಿನ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ’ ಎಂದು ಹೇಳಿದರು.

ADVERTISEMENT

‘20ಕ್ಕೂ ಹೆಚ್ಚು ಹೂಡಿಕೆದಾರರು, ಮೆಂಟರ್‌ಗಳು, 25ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದಾರೆ. 100ಕ್ಕೂ ಹೆಚ್ಚು ಮಳಿಗೆಗಳು ಮತ್ತು 15ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಸಂಶೋಧಕರು, ಕೈಗಾರಿಕಾ ವೃತ್ತಿಪರರು ಮೊದಲಾದವರು ಭಾಗವಹಿಸಲಿದ್ದಾರೆ. ‘ಒಂದು ಸ್ಥಳ, ಹಲವು ಅವಕಾಶಗಳು’ ಮತ್ತು ‘ನವೋದ್ಯಮದಿಂದ ನವಭಾರತ’ ಘೋಷ ವಾಕ್ಯದಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮೈಸೂರಿನಲ್ಲಿ ನವೋದ್ಯಮ ಆರಂಭಿಸಲು ಇರುವ ಅವಕಾಶಗಳ ಕುರಿತು ಬೆಳಕು ಚೆಲ್ಲಲಾಗುವುದು’ ಎಂದು ವಿವರಿಸಿದರು.

‘ವಿಶೇಷವಾಗಿ ವಿದ್ಯಾರ್ಥಿಗಳು ಜಾತ್ರೆಯಲ್ಲಿ ಭಾಗವಹಿಸಿ, ನವೋದ್ಯಮದ ಅವಕಾಶಗಳ ಕುರಿತು ತಿಳಿದುಕೊಳ್ಳಬೇಕು ಎನ್ನುವುದು ನಮ್ಮ ಆಶಯವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9448154063 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಆಯೋಜಕರಾದ ರವಿಶಂಕರ್‌, ಯಶವಂತ್, ಮಹೇಶ್‌ ಕಟ್ಟಾಳೆ, ಪ್ರಜ್ವಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.