ADVERTISEMENT

ಶಾಕುಂತ್ಲೆ ಸಿಕ್ಕಳು, ಸುಮ್‌ ಸುಮ್ನೇ ನಕ್ಕಳು…

ಯುವಕರ ಮತ್ತೇರಿಸಿದ ಸಂಚಿತ್‌ ಹೆಗ್ಡೆ, ಚಂದನ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 9:40 IST
Last Updated 5 ಅಕ್ಟೋಬರ್ 2019, 9:40 IST
ವೈಷ್ಣವಿ ಅವರ ನೃತ್ಯದ ಸೊಬಗು
ವೈಷ್ಣವಿ ಅವರ ನೃತ್ಯದ ಸೊಬಗು   

ಮೈಸೂರು: ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಚಂದನ್‌ ಶೆಟ್ಟಿ, ಸಂಚಿತ್‌ ಹೆಗ್ಡೆ ಮೋಹ ಆವರಿಸಿಕೊಂಡಿತ್ತು. ತಣ್ಣಗೆ ಬೀಸಿ ಬರುತ್ತಿದ್ದ ಗಾಳಿಯಲ್ಲೂ ಇಡೀ ವಾತಾವರಣವನ್ನು ಬೆಚ್ಚಗಾಗಿಸಿತು.

ಗಾಯಕರು ಹುಚ್ಚೆಬ್ಬಿಸಿ ಕುಣಿಸುವಂತೆ ಹಾಡುತ್ತಿದ್ದರೆ, ಕಿರುತೆರೆ ನಟಿಯರು ಯುವಕರ ಎದೆಬಡಿತ ಹೆಚ್ಚಿಸುವಂತೆ ನರ್ತಿಸಿದರು. ಹಾಡು, ನೃತ್ಯ, ಬೆಳಕಿನ ವಯ್ಯಾರದ ಸಮ್ಮಿಲನವಾದ ಯುವ ದಸರಾ ವೇದಿಕೆ ಎಲ್ಲರ ಕಣ್ಮನ ಸೆಳೆಯಿತು.

‘ಶಾಕುಂತ್ಲೆ ಸಿಕ್ಕಳು, ಸುಮ್‌ ಸುಮ್ನೇ ನಕ್ಕಳು, ಶಾಕ್‌ ಆಯ್ತು ನರ ನಾಡಿ ಒಳಗೆ, ದುಷ್ಯಂತ ಆಗಲಾ ಉಂಗ್ರಾನಾ ನೀಡಲಾ’ ಗೀತೆಯನ್ನು ಸಂಚಿತ್‌ ಹೆಗ್ಡೆ ಹಾಡುತ್ತಿದ್ದರೆ, ಸಭಾಂಗಣದಲ್ಲಿ ಯುವಕ–ಯುವತಿಯರು ಕುರ್ಚಿಗಳಿಂದ ಮೇಲೆದ್ದು ಕುಣಿಯಲಾರಂಭಿಸಿದರು. ಆ ಹಾಡಿಗೆ ಪ್ರೇಕ್ಷಕರೂ ದನಿಗೂಡಿಸಿದರು.

ADVERTISEMENT

ಸತತವಾಗಿ ಏಳು ಹಾಡು ಹಾಡಿ ಸಂಗೀತ ಪ್ರೇಮಿಗಳ ಮನಸೂರೆಗೊಂಡರು. ‘ಟಗರು ಬಂತು ಟಗರು, ವಾರೆ ನೋಟ ನೋಡೈತೆ ಕಾಲು ಕೆರೆದು ನಿಂತೈತೆ’ ಹಾಡಿಗೆ ಇಡೀ ಸಭಾಂಗಣ ಸಂಭ್ರಮಿಸಿತು. ‘ಓ ನಂದಿನಿ ಓ ನಂದಿನಿ ನೀ ನನ್ನ ಪ್ರಾಣ ಕಣೇ’ ಎಂದು ಹಾಡುತ್ತಾ ಯುವತಿಯರ ಮನ ಗೆದ್ದರು.

ರ‍್ಯಾಪರ್‌ ಚಂದನ್‌ ಶೆಟ್ಟಿ ವೇದಿಕೆಗೆ ಬಂದಾಗ ಅಕ್ಷರಶಃ ಮಿಂಚಿನ ಸಂಚಲನ. ಧಮ್‌ ಪವರ್ರೇ.... ಗೀತೆಗೆ ದನಿಯಾಗುತ್ತಾ ವೇದಿಕೆ ಏರಿದರು. ‘ಗೆಳೆಯ ಗೆಳೆಯ ಗೆಲುವೇ ನಮದಯ್ಯ’ ಎಂಬ ಗೀತೆಗೆ ಹಾಡಿ ರಂಜಿಸಿದರು. ಅಷ್ಟರಲ್ಲಿ ಗಡಿಯಾರದ ಮುಳ್ಳು ರಾತ್ರಿಯ 10.30 ಗಂಟೆ ದಾಟಿತ್ತು.

ಇದಕ್ಕೂ ಮೊದಲು ಸರಿಗಮಪ ಖ್ಯಾತಿಯ ಸುಹಾನ ಹಾಡಿದ ‘ಮುಕುಂದ ಮುರಾರಿ’ ಚಿತ್ರದ ‘ನೀನೆ ರಾಮ, ನೀನೆ ಶಾಮ, ನೀನೆ ಅಲ್ಲಾ, ನೀನೆ ಯೇಸು…’ ಹಾಡಿಗೆ ಎಲ್ಲರೂ ತಲೆದೂಗಿದರು. ಜೊತೆಗೆ ಫ್ಯಾಷನ್‌ ಷೋ ಕಣ್ಮನ ಸೆಳೆಯಿತು. ವಿಕ್ರಂ ರವಿಚಂದ್ರನ್‌ ವೇದಿಕೆಗೆ ಬಂದು ಹೋದರು.

ಲಕ್ಸ್‌ ಸೋಪು ಹಾಕಿ ಜಳಕ ಮಾಡಿ ಜಸ್ಟ್‌ ಬಂದೀನಿ... ಚುಟು ಚುಟು ಅಂತೈತಿ... ನಾ ಬೋರ್ಡ್ ಇರದ ಬಸ್ಸನು ಹತ್ತಿ ಬಂದ ಚೋಕರಿ... ಬಂತು ಬಂತು ಕರೆಂಟು ಬಂತು... ಹಾಡಿಗೆ ಕಿರುತೆರೆ ನಟಿಯರು ಸೊಗಸಾಗಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.