ಮೈಸೂರು: ವಿಶ್ವ ವಿಖ್ಯಾತ ದಸರಾ ಉದ್ಘಾಟನೆ ದಿನದಿಂದಲೇ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಜನಸಂದಣಿ ಉಂಟಾಗಿದೆ. ಇದರಿಂದಾಗಿ ವಾಹನ ದಟ್ಟಣೆ ಬಿಸಿ ನಗರ ಸೇರಿದಂತೆ ಹೊರವಲಯಕ್ಕೂ ತಟ್ಟಿದೆ.
ಸಂಜೆಯಿಂದ ತಡರಾತ್ರಿವರೆಗೆ ನಗರದ ಪ್ರಮುಖ ಹಾಗೂ ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನಗಳ ಸಾಲಿನಿಂದ ಸಿಗ್ನಲ್ ದಾಟಲು ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಯುವ ದಸರಾ, ಆಹಾರ ಮೇಳ, ದಸರಾ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಮೊದಲಾದವುಗಳಲ್ಲಿ ಪಾಲ್ಗೊಳ್ಳಲು ರಾತ್ರಿ ವೇಳೆ ಬಹಳಷ್ಟು ಮಂದಿ ಬರುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೂ ತೊಂದರೆಯಾಗಿದೆ.
ಅರಮನೆ ಸುತ್ತಮುತ್ತಲಿನ ರಸ್ತೆ, ಅರಸು ರಸ್ತೆ, ಹಾರ್ಡಿಂಜ್ ವೃತ್ತ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಾಡಹಬ್ಬದ ಆಕರ್ಷಕ ದೀಪಾಲಂಕಾರ ವೀಕ್ಷಣೆಗೆ ಮುಗಿಬಿದ್ದಿದ್ದು, ಯುವಜನರು ತಡರಾತ್ರಿವರೆಗೆ ಸಿಟಿ ರೌಂಡ್‌ನಲ್ಲಿ ತೊಡಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ನಗರದ ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ, ವಾಹನಗಳ ನಿಲುಗಡೆ ನಿಷೇಧ ಹಾಗೂ ಬಸ್ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡಿರುವುದು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಶ್ರಮಪಡಬೇಕಾಗಿದೆ.
‘ದೀಪಾಲಂಕಾರ ವೀಕ್ಷಣೆಗೆಂದು ಕುಟುಂಬದವರು, ಸಂಬಂಧಿಕರೊಂದಿಗೆ ಹೊರಟಿದ್ದೆವು. ವಾಹನಗಳ ಸಾಲು, ಜನದಟ್ಟಣೆ ನೋಡಿ ದಸರಾ ಬಳಿಕ ಹೋಗಲು ನಿರ್ಧರಿಸಿದ್ದೇವೆ’ ಎಂದು ಸರಸ್ವತಿಪುರಂ ನಿವಾಸಿ ಶಿವಾನಂದ್ ಹೇಳಿದರು.
ಕ್ಯೂ ಸಿಸ್ಟಂ: ‘ದಸರಾದಿಂದಾಗಿ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿದೆ. ವಾಹನಗಳು ಒಮ್ಮೆಲೆ ನುಗ್ಗುವುದರಿಂದ ಸಂಚಾರ ದಟ್ಟಣೆ ಉಂಟಾಗಲಿದೆ. ಇದನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದ್ದು, ಕ್ಯೂ ಸಿಸ್ಟಂನಲ್ಲಿ ವಾಹನಗಳನ್ನು ಬಿಡಲಾಗುತ್ತಿದೆ’ ಎಂದು ಟ್ರಾಫಿಕ್ ಪೊಲೀಸ್ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾತ್ರಿ ವೇಳೆ ಬಹಳ ಮಂದಿ ಭಾಗಿ ನಗರದ ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರ ಶ್ರಮ
ವಾಹನಗಳ ಸದ್ದಿನಿಂದ ಕಿರಿಕಿರಿ ಉಂಟಾಗಿದೆ. ದೀಪಾಲಂಕಾರ ವೀಕ್ಷಣೆಗೆಂದು ಬಂದು ವಾಹನ ದಟ್ಟಣೆಯಲ್ಲೇ ಕಾಲ ಕಳೆಯಬೇಕಾಯಿತುಸಂಜಯ್ ಗೋಪಾಲ್ ಸಂಶೋಧನಾ ವಿದ್ಯಾರ್ಥಿ ಮಾನಸ ಗಂಗೋತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.