ಮೈಸೂರು: ಅನುಭವಿ ಆನೆಗಳಾದ ‘ಗೋಪಿ’, ‘ಸುಗ್ರೀವ’ ಜೊತೆಯಲ್ಲಿ ಇದೇ ಮೊದಲ ಬಾರಿ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ‘ಶ್ರೀಕಂಠ’ ಸೋಮವಾರ ಅರಮನೆ ಪ್ರವೇಶಿಸಿದ. ಗಜಪಡೆಯ ಎರಡನೇ ತಂಡದ ಐದೂ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ಮತ್ತಿಗೋಡು ಆನೆ ಶಿಬಿರದಿಂದ ಲಾರಿಯಲ್ಲಿ ಬಂದ, ಸುಂದರ ದಂತ, ಅಗಲವಾದ ಹಣೆ, ಎತ್ತರ ಕಾಯದ ‘ಶ್ರೀಕಂಠ’ (56) ಸೊಂಡಿಲೆತ್ತಿ ನಮಸ್ಕರಿಸಿದನು. ಆನೆಗಳನ್ನು ನೋಡುತ್ತಿದ್ದಂತೆ ನೆರೆದಿದ್ದವರು, ಚಪ್ಪಾಳೆಯ ಮಳೆಗರೆದು ಜಯಕಾರ ಹಾಕಿದರು. ತನ್ನದೇ ಶಿಬಿರದ ಹಿರಿಯ, ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ತಂಡವನ್ನು ಸೇರಿಕೊಂಡನು.
ಅವನೊಂದಿಗೆ 15 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ ದುಬಾರೆ ಆನೆ ಶಿಬಿರದ ಅನುಭವಿ ‘ಗೋಪಿ’ (42), ಮೂರು ವರ್ಷದಿಂದ ಪಾಲ್ಗೊಳ್ಳುತ್ತಿರುವ ‘ಸುಗ್ರೀವ’ (43), ಭೀಮನಕಟ್ಟೆಯ ರೂಪಾ (44), ದುಬಾರೆಯ ಹೇಮಾವತಿ (11) ಜೊತೆಯಾದರು.
ಅರಮನೆ ಅರ್ಚಕ ಪ್ರಹ್ಲಾದ ರಾವ್ ಅವರು ಆನೆಗಳ ಪಾದಗಳನ್ನು ತೊಳೆದು ಸೇವಂತಿಗೆ ಹೂ ಕಟ್ಟಿದರು. ಮಾವುತರು ಆನೆಗಳನ್ನು ಹೂ ಹಾರದಿಂದ ಅಲಂಕರಿಸಿದರು. ನಂತರ ಹಣೆಗೆ ಗಂಧ ಲೇಪಿಸಿ ‘ಓಂ’ಕಾರ ಬರೆದು ಗಜಪೂಜೆ’ ಸಲ್ಲಿಸಲಾಯಿತು. ಎಲ್ಲ ಆನೆಗಳಿಗೂ ಕಬ್ಬು–ಬೆಲ್ಲ, ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಲಾಯಿತು. ಗಣಪತಿ ಅರ್ಚನೆ ಜೊತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಡಿಸಿಎಫ್ ಐ.ಬಿ.ಪ್ರಭುಗೌಡ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಪುಷ್ಪಾರ್ಚನೆ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು, ಕಾವಾಡಿಗರು ಕೈಮುಗಿದರು.
ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ಜೊತೆ ಭೀಮ, ಕಂಜನ್, ಏಕಲವ್ಯ, ಧನಂಜಯ, ಲಕ್ಷ್ಮಿ, ಕಾವೇರಿ, ಮಹೇಂದ್ರ, ಪ್ರಶಾಂತ ಆನೆಗಳು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವೀರನಹೊಸಹಳ್ಳಿಯಿಂದ ಆ.4ರಂದು ಮೈಸೂರಿನ ಅರಣ್ಯ ಭವನಕ್ಕೆ ಬಂದಿದ್ದವು. ಆ.10ರಂದು ಗಜಪಡೆ ಮೊದಲ ತಂಡ ಅರಮನೆ ಪ್ರವೇಶಿಸಿತ್ತು.
3 ಆನೆಗಳಿಗೆ ಮೊದಲ ದಸರೆ
ಶ್ರೀಕಂಠ ರೂಪಾ ಹಾಗೂ ಹೇಮಾವತಿ ಆನೆಗಳಿಗೆ ಮೊದಲ ದಸರೆಯಾಗಿದೆ. ಶನಿವಾರಸಂತೆ ಅರಣ್ಯದಲ್ಲಿ ‘ಶ್ರೀಕಂಠ’ ಆನೆಯನ್ನು ಸೆರೆ ಹಿಡಿಯಲಾಗಿತ್ತು. 2.86 ಮೀ. ಎತ್ತರ 3.25 ಮೀಟರ್ ಉದ್ದವಿದ್ದು 5500 ತೂಕ ಹೊಂದಿದ್ದಾನೆ. ‘ರೂಪಾ’ ಆನೆಯನ್ನು 2016ರಲ್ಲಿ ಸರ್ಕಸ್ ಕಂಪನಿಯೊಂದರಿಂದ ರಕ್ಷಿಸಲಾಗಿತ್ತು. ಕಿರಿಯಳಾದ ‘ಹೇಮಾವತಿ’ 2014ರಲ್ಲಿ ದುಬಾರೆ ಶಿಬಿರದಲ್ಲಿ ಜನಿಸಿದ್ದಳು.
ತೂಕ ಪರೀಕ್ಷೆ
‘2ನೇ ತಂಡದ ಆನೆಗಳಿಗೆ ಮಾತ್ರ ಆ.26ರಂದು ಬೆಳಿಗ್ಗೆ 8ಕ್ಕೆ ತೂಕ ಪರೀಕ್ಷೆ ನಡೆಯಲಿದೆ. ಎಲ್ಲ 14 ಆನೆಗಳಿಗೆ ಎಂದಿನಂತೆ ತಾಲೀಮು ನಡೆಯಲಿದೆ. ಮುಂದಿನ ವಾರ ಭಾರ ಹೊರುವ ತಾಲೀಮು ಇರಲಿದೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.